ವಿಜಯ ಸಿಂಧೂರ, ಸುದ್ದಿ
ಗದಗ : ಸಹೋದರನ ಮಗಳ ಶುಭ ಕಾರ್ಯದಲ್ಲಿ
ಪಾಲ್ಗೊಳ್ಳುವ ಸಂಭ್ರಮದಲ್ಲಿದ್ದ ಕುಟುಂಬವೊಂದು ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿ ಸಂಭ್ರಮ ಕ್ಷಣಾರ್ಧದಲ್ಲೇ ಶೋಕವಾಗಿ ಮಾರ್ಪಟ್ಟ ಘಟನೆ ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಸಮೀಪ ನಡೆದಿದೆ.
ಟ್ರ್ಯಾಕ್ಟರ್ ಪಲ್ಟಿಯಾಗಿ 60 ವರ್ಷದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಬಸವ್ವ ಬಸಪ್ಪ ಸತ್ಯಪ್ಪನವರ (60) ಎಂದು ಗುರುತಿಸಲಾಗಿದೆ.
ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ನಿವಾಸಿಗಳು ಸಹೋದರನ ಮಗಳ ಶುಭ ಸಮಾರಂಭದಲ್ಲಿ ಭಾಗವಹಿಸಲು ಮುಂಡರಗಿ ತಾಲೂಕಿನ ಬೀಡನಾಳ ಗ್ರಾಮಕ್ಕೆ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ತಿಮ್ಮಾಪೂರ ಗ್ರಾಮದ ಬಳಿ ಟ್ರ್ಯಾಕ್ಟರ್ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ. ಪರಿಣಾಮ ಟ್ರ್ಯಾಕ್ಟರ್‌ನಲ್ಲಿದ್ದ ಪ್ರಯಾಣಿಕರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ.ಇನ್ನು ಟ್ರ್ಯಾಕ್ಟರ್ ಬಿದ್ದ ಅಳತೆ ದೂರದಲ್ಲಿಯೇ ವಿದ್ಯುತ್ ಟಿಸಿ ಇದ್ದು, ಅದೃಷ್ಟವಶಾತ್ ಸ್ವಲ್ಪದರಲ್ಲೇ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಅಪಘಾತದ ತೀವ್ರತೆಗೆ ಬಸವ್ವ ಬಸಪ್ಪ ಸತ್ಯಪ್ಪನವರ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಟ್ರ್ಯಾಕ್ಟರ್‌ನಲ್ಲಿದ್ದವರ ಪೈಕಿ ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಹಾಗೂ ಪೊಲೀಸರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಗದಗ ಜಿಲ್ಲಾ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಕುಟುಂಬದ ಸಂಭ್ರಮದ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ. ಶುಭ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಕುಟುಂಬ ಸದಸ್ಯರು ಅಪಘಾತಕ್ಕೀಡಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.
ಅಪಘಾತಕ್ಕೆ ಅತಿವೇಗ ಕಾರಣವೇ, ರಸ್ತೆ ಪರಿಸ್ಥಿತಿ ಕಾರಣವೇ ಅಥವಾ ಚಾಲಕನ ನಿಯಂತ್ರಣ ತಪ್ಪಿದ್ದೇ ದುರಂತಕ್ಕೆ ಕಾರಣವೇ ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ನಿಖರ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
