ವಿಜಯ ಸಿಂಧೂರ,ನರಗುಂದ
ವಿಶ್ವ ಪರಿಸರ ದಿನದ ಅಂಗವಾಗಿ ತಾಲೂಕಿನ ಬನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಲಗೇರಿ ಗ್ರಾಮದಲ್ಲಿ ತಾಲೂಕು ಪಂಚಾಯತ್ ನರಗುಂದ ಹಾಗೂ ಬನಹಟ್ಟಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕುರ್ಲಗೇರಿ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನರಗುಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಅವರು 10 ಸಸಿಗಳನ್ನು ನೆಟ್ಟು ನೀರುಣಿಸುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪರಿಸರ ದಿನವನ್ನು ಕೇವಲ ಆಚರಿಸಿದರೆ ಸಾಲದು, ಪರಿಸರ ಸಂರಕ್ಷಣೆಯನ್ನು ನಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಸಾರ್ವಜನಿಕರ ಸಹಕಾರವಿಲ್ಲದೆ ಪರಿಸರ ರಕ್ಷಣೆ ಸಾಧ್ಯವಿಲ್ಲ. ಇಂದು ನೆಟ್ಟಿರುವ ಸಸಿಗಳು ಬೆಳೆದು ಗ್ರಾಮಸ್ಥರು ಹಾಗೂ ಪ್ರಾಣಿ-ಪಕ್ಷಿಗಳಿಗೆ ನೆರಳು ನೀಡುವವರೆಗೂ ಅವುಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಪರಿಸರ ಸಂರಕ್ಷಣೆ ಮಾತ್ರವಲ್ಲದೆ ಗ್ರಾಮಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹಾಗೂ ಅವುಗಳ ನಿರ್ವಹಣೆಯಲ್ಲಿಯೂ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಸಹಕಾರ ನೀಡಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬನಹಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಮಂಜುನಾಥ ಗಣಿ ಅವರು, ಕುಡಿಯುವ ನೀರಿನ ಟ್ಯಾಂಕ್ ಆವರಣವನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಮನವಿ ಸ್ವೀಕರಿಸಿದ 15 ದಿನಗಳೊಳಗೆ ಸ್ಥಳವನ್ನು ಸ್ವಚ್ಛಗೊಳಿಸಲಾಗಿದ್ದು, ಇಂದು ಅದೇ ಸ್ಥಳದಲ್ಲಿ ಪರಿಸರ ದಿನಾಚರಣೆ ನಡೆಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಸಾರ್ವಜನಿಕರು ಇದೇ ರೀತಿಯ ಸಹಕಾರ ನೀಡಿದರೆ ಗ್ರಾಮದಲ್ಲಿ ಹಂತ ಹಂತವಾಗಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಗ್ರಾಮಸ್ಥರು ಕಾಪಾಡಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬನಹಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಡಿ. ಪೂಜಾರ, ಗ್ರಾಮದ ಗಣ್ಯರಾದ ನಾಗಯ್ಯ ಹಿರೇಮಠ, ಗ್ರಾಮದ ಹಿರಿಯರಾದ ವಿರುಪಾಕ್ಷಪ್ಪ ಶಾನವಾಡ, ಶಿವರುದ್ರಪ್ಪ ಸುಳ್ಳದ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಾಳಪ್ಪ ಪೂಜಾರ, ಬಿಲ್ ಕಲೆಕ್ಟರ್ ಶಿವನಪ್ಪ ಕಲ್ಲಾಪೂರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
