ವಿಜಯ ಸಿಂಧೂರ, ತಾಳಿಕೋಟೆ
ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಯುವಕ ರವಿಚಂದ್ರ ದೇವಪ್ಪ ಮಾದರ ಅವರನ್ನು ಬಾಗೇವಾಡಿ ತಾಲೂಕಿನ ಹಂಗರಗಿ ಕ್ರಾಸ್ ಬಳಿ ಕ್ರೂರ ಹಾಗೂ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿ, ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಅಂಬೇಡ್ಕರ್ ಸೇನೆ ಹಾಗೂ ವಿವಿಧ ಸಂಘಟನೆಗಳ ವತಿಯಿಂದ (ಜೂನ್. 1)ಸೋಮವಾರ ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಸಭೆಯನ್ನು ಉದ್ದೇಶಿಸಿ ಅಂಬೇಡ್ಕರ್ ಸೇನೆಯ ಜಿಲ್ಲಾ ಉಪಾಧ್ಯಕ್ಷ ಬಸ್ಸು ಕಟ್ಟಿಮನಿ ಮಾತನಾಡಿ, ಇಂತಹ ಕ್ರೂರ ಕೃತ್ಯ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕಿದ್ದು, ಎಲ್ಲ ಸಮುದಾಯದವರು ಒಗ್ಗಟ್ಟಾಗಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಡಿ, ಎಸ್ ಎಸ್
(DSS) ನಾಗವಾರ ಬಣದ ಬೆಳಗಾವಿ ವಿಭಾಗ ಸಂಚಾಲಕ ದೇವೇಂದ್ರ ಹಾದಿಮನಿ ಮಾತನಾಡಿ, ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸುವುದು ಹಾಗೂ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವುದು ಅತ್ಯಾವಶ್ಯಕವಾಗಿದ್ದು, ಇದರಿಗಾಗಿ ಎಲ್ಲರೂ ಸಂಘಟಿತವಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಹೇಳಿದರು.ಡಿ,ಎಸ್,ಎಸ್
(DSS )ತಾಲೂಕಾಧ್ಯಕ್ಷ ರಮೇಶ್ ದೊಡಮನಿ (ಸಾಸನೂರ) ಹಾಗೂ ಅಂಬೇಡ್ಕರ್ ಧ್ವನಿ ಚಂದ್ರಕಾಂತ ಎಸ್. ಕಾದ್ರೋಳಿ ಬಣ ಮಾತನಾಡಿ, ಜಾತಿ-ಧರ್ಮ ಭೇದವಿಲ್ಲದೆ ಎಲ್ಲರೂ ಪ್ರತಿಭಟನೆಗೆ ಬೆಂಬಲ ನೀಡಿ, ನ್ಯಾಯಕ್ಕಾಗಿ ಹೋರಾಟವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.

ಅಂಬೇಡ್ಕರ್ ಸೇನೆ ತಾಲೂಕ ಅಧ್ಯಕ್ಷ ಗೋಪಾಲ್ ಕಟ್ಟಿಮನಿ ಸಭೆಯ ರೂಪರೇಷೆ ವಿವರಿಸಿದರು.
ಸಭೆಯಲ್ಲಿ ಅಂಬೇಡ್ಕರ್ ಸೇನೆ ತಾಳಿಕೋಟಿ ತಾಲೂಕ ಖಜಾಂಚಿ ಪರಶುರಾಮ ತಳವಾರ (ಮಿಣಜಗಿ), ಹಿರಿಯರಾದ ಯಮನಪ್ಪ ಕಟ್ಟಿಮನಿ, ಹುಲಗಪ್ಪ ಕಟ್ಟಿಮನಿ, ದ್ಯಾಮಣ್ಣ ಸೋಮನಾಳ, ರಮೇಶ್ ಮಾದರ, ದೇವಪ್ಪ ತುಂಬಗಿ, ಶಂಕ್ರಪ್ಪ ದೊಡಮನಿ, ಅಯ್ಯಪ್ಪ ಸಾಸನೂರ, ನಿಂಗಪ್ಪ ಮಾದರ, ಬಸವರಾಜ್ ಸಾಸನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(ಜೂನ್. 1)ಸೋಮವಾರ ರಂದು ನಡೆಯಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟನೆಗಳು ಕರೆ ನೀಡಿದ್ದಾರೆ.
