ವಿಜಯ ಸಿಂಧೂರ ತಾಳಿಕೋಟೆ
ಆನ್‌ಲೈನ್ ಔಷಧ ಮಾರಾಟ (ಇ-ಫಾರ್ಮಸಿ) ವ್ಯವಸ್ಥೆಯ ಅಕ್ರಮ ಚಟುವಟಿಕೆಗಳು ಹಾಗೂ ಕಾರ್ಪೊರೇಟ್ ಕಂಪನಿಗಳ ಮಾರುಕಟ್ಟೆ ಹಾವಳಿಯನ್ನು ಖಂಡಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ (AIOCD) ಕರೆ ನೀಡಿದ ದೇಶವ್ಯಾಪಿ ಒಂದು ದಿನದ ಔಷಧ ಬಂದ್‌ಗೆ ತಾಳಿಕೋಟೆ ಪಟ್ಟಣದ ಔಷಧ ವ್ಯಾಪಾರಿಗಳು ಬೆಂಬಲ ಸೂಚಿಸಿದರು.

ವಿಜಯಪುರ ಜಿಲ್ಲಾ ಹಾಗೂ ತಾಳಿಕೋಟೆ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ವ್ಯಾಪಾರಿಗಳು ಸ್ಥಳೀಯ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಇ-ಫಾರ್ಮಸಿ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ದೇಶಾದ್ಯಂತ ಸುಮಾರು 12.40 ಲಕ್ಷಕ್ಕೂ ಹೆಚ್ಚು ಔಷಧ ವ್ಯಾಪಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಇವರನ್ನು ಅವಲಂಬಿಸಿರುವ 4ರಿಂದ 5 ಕೋಟಿ ಜನರ ಜೀವನೋಪಾಯಕ್ಕೆ ಇ-ಫಾರ್ಮಸಿ ವ್ಯವಸ್ಥೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಸಂಘಟನೆ ತಿಳಿಸಿದೆ.
ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಶಾಶ್ವತ ಪರಿಹಾರ ದೊರಕದ ಹಿನ್ನೆಲೆಯಲ್ಲಿ ಈ ಬಂದ್ ಅನಿವಾರ್ಯವಾಗಿದೆ ಎಂದು ಹೇಳಿದರು.ಸಂಘದ ಪ್ರಮುಖ ಬೇಡಿಕೆಗಳಲ್ಲಿ ಅನಧಿಕೃತ ಇ-ಫಾರ್ಮಸಿಗಳ ನಿಯಂತ್ರಣ, 2018ರ GSR 817(E) ಅಧಿಸೂಚನೆ ಹಿಂಪಡೆಯುವುದು, ಕಾರ್ಪೊರೇಟ್ ಕಂಪನಿಗಳ ಅತಿಯಾದ ರಿಯಾಯಿತಿ ದರ (Predatory Pricing) ನಿಯಂತ್ರಣ ಹಾಗೂ ಕೋವಿಡ್ ಅವಧಿಯಲ್ಲಿ ಜಾರಿಗೆ ತಂದ 2020ರ GSR 220(E) ನಿಯಮ ರದ್ದುಪಡಿಸುವುದು ಸೇರಿವೆ.ಇ-ಫಾರ್ಮಸಿ ಮೂಲಕ ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ, ನಕಲಿ ಪ್ರಿಸ್ಕ್ರಿಪ್ಷನ್‌ಗಳ ಬಳಕೆ, ಮಾದಕ ದ್ರವ್ಯಗಳ ಸುಲಭ ಲಭ್ಯತೆ ಹಾಗೂ ನಕಲಿ ಔಷಧಗಳ ಹರಡುವಿಕೆ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುತ್ತಿದೆ ಎಂದು ಸಂಘಟನೆ ಎಚ್ಚರಿಸಿದೆ.
“ಔಷಧಗಳು ಸಾಮಾನ್ಯ ವಸ್ತುಗಳಲ್ಲ; ಅವು ನೇರವಾಗಿ ರೋಗಿಗಳ ಜೀವಕ್ಕೆ ಸಂಬಂಧಿಸಿದ್ದಾಗಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು,” ಎಂದು ಸಂಘಟನೆ ತಿಳಿಸಿದೆ.ಈ ವೇಳೆ ತಾಲೂಕು ಅಧ್ಯಕ್ಷ ಸುಭಾಷ್ ಸಾಳಂಕೆ ವಾಸುದೇವ ಹೇಬಸೂರ, ಮೈನುದ್ದಿನ ಕೊರ್ತಿ, ಸಂತೋಷ ಪ್ರಥಮಶೆಟ್ಟಿ, ರಮೇಶ ಸಾಳಂಕೆ, ಅಬಾಲೆ ಮೆಡಿಕಲ್, ಕಾಂತು ಸಜ್ಜನ, ರವಿ ಪಾಟೀಲ, ಶಾಂತಗೌಡ ಪಾಟೀಲ, ಕುಮಾರ ಸುರಪುರ, ಸಾಗರ ಮೆಡಿಕಲ್,ಸೇರಿದಂತೆ ಅನೇಕ ಔಷಧ ವ್ಯಾಪಾರಿಗಳು ಉಪಸ್ಥಿತರಿದ್ದರು.
