ವಿಜಯ ಸಿಂಧೂರ, ತಾಳಿಕೋಟೆ
ಶಿಕ್ಷಣವೆಂಬ ಅಸ್ತ್ರವನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಿ, ನಮ್ಮ ಗುರಿ ತಲುಪಲು ಸಾಧ್ಯ ಎಂದು ಜಮಖಂಡಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರದ ಸಂಯೋಜಕರು ಹಾಗೂ ಸಾಹಿತಿಗಳಾದ ಡಾ. ಯಶವಂತ ಕೊಕ್ಕನವರ ನುಡಿದರು.

ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಶ್ರೀ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್., ಎನ್.ಸಿ.ಸಿ, ವಾಯ್.ಆರ್.ಸಿ., ಇ.ಎಲ್.ಸಿ., ಸ್ಕೌಟ್ಸ್ & ಗೈಡ್ಸ್ ಚಟುವಟಿಕೆಗಳ ಮುಕ್ತಾಯ ಸಮಾರಂಭ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು.ಸ್ಥಳೀಯ ವಿರಕ್ತಶ್ರೀ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅವರು ತಮ್ಮ ಚಮತ್ಕಾರಿಕ ಭಾಷಣದ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ಮಹಾವಿದ್ಯಾಲಯದ ಚೇರಮನ್ ವಿ. ಸಿ. ಹಿರೇಮಠ ಮಾತನಾಡಿ, “ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಸದಾ ನಿರತರಾಗಿರಬೇಕು. ನಮ್ಮ ಮಹಾವಿದ್ಯಾಲಯವು ಕಳೆದ ೪೯ ವರ್ಷಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಾ ಬಂದಿದ್ದು, ಸದ್ಯ ಸುವರ್ಣ ಮಹೋತ್ಸವ (೫೦ ವರ್ಷ)ಆಚರಣೆಯ ಸಂಭ್ರಮದಲ್ಲಿದೆ. ಈ ಸುದಿನಗಳಲ್ಲಿ ಸಂಸ್ಥೆಗೆ ಮತ್ತಷ್ಟು ಮೆರಗು ನೀಡಲು ಆಡಳಿತ ಮಂಡಳಿ ಶ್ರಮಿಸಲಿದೆ” ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ. ಡಿ. ಬಿ. ಮೂಗಡ್ಲಿಮಠ “ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ, ಸಮಯಪ್ರಜ್ಞೆ ಹಾಗೂ ದೃಢಸಂಕಲ್ಪವನ್ನು ಅಳವಡಿಸಿಕೊಳ್ಳಬೇಕು. ಉನ್ನತ ಶಿಕ್ಷಣದ ಮೂಲಕ ಉದ್ಯೋಗ ಗಿಟ್ಟಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ವೇದಿಕೆಯ ಮೇಲೆ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಎಮ್. ಎಸ್. ಸರಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ಕೆ. ಎಸ್. ಮುರಾಳ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.ಪ್ರಾರ್ಥನೆ:ಕುಮಾರಿ ಮಮತಾಜ ನಾಯ್ಕೋಡಿ ಅವರಿಂದ ಪ್ರಾರ್ಥನಾ ಗೀತೆ. ಅತಿಥಿಗಳ ಪರಿಚಯ:ಡಾ. ಸುಜಾತಾ ಚಲವಾದಿ ಅವರಿಂದ ಪರಿಚಯ ಕಾರ್ಯಕ್ರಮ. ಬಹುಮಾನ ವಿತರಣೆ:ವರ್ಷವಿಡೀ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶ್ರೀ ಕೆ. ಬಿ. ದೇಸಾಯಿ ಅವರು ಬಹುಮಾನ ವಿತರಣೆ ನಡೆಸಿಕೊಟ್ಟರು. ನಿರೂಪಣೆ:ಡಾ. ದೀಪಾ ಮಾಳಗೆ ಮತ್ತು ಶ್ರೀಮತಿ ಸಂಗೀತಾ ಕೊಡೆಕಲ್ಲಮಠ ಕಾರ್ಯಕ್ರಮ ನಿರೂಪಿಸಿದರು. ವಂದನಾರ್ಪಣೆ:ಶ್ರೀಮತಿ ಲಲಿತಾ ಗೌಡರ ಅವರು ಎಲ್ಲರಿಗೂ ವಂದಿಸಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಡಾ. ಅಶೋಕ ಆರ್. ರಾಠೋಡ, ವಿದ್ಯಾರ್ಥಿ ಪ್ರತಿನಿಧಿ ಕುಮಾರಿ ವಿದ್ಯಾಶ್ರೀ ಅಗಸರ ಹಾಗೂ ಮಹಾವಿದ್ಯಾಲಯದ ಸಮಸ್ತ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದು ಸಹಕರಿಸಿದರು.
