ಸಿಂದಗಿ: ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಪರ ಸಂಘಟನೆಗಳು ಕಾರ್ಯಪ್ರವೃತ್ತರಾಗಬೇಕು ಎಂದು ವಿಶ್ರಾಂತ ಆಚಾರ್ಯ ಹಾಗೂ ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಎಸ್ ಹೈಯಾಳ್ಕರ ಹೇಳಿದರು.

ಮಂಗಳವಾರ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೨ ನೇಯ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕನ್ನಡವೆಂದರೆ ಕೇವಲ ಅದೊಂದು ಭಾಷೆಯಲ್ಲ ಅದೊಂದು ಸಂಸ್ಕೃತಿಯ ಹಿರಿಮೆ.ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಯ ಅಸ್ಮಿತೆಗಾಗಿ ನಾವೆಲ್ಲರೂ ಹೋರಾಡಬೇಕು. ಭಾಷಾವಾರು ಹಾಗೂ ವಿಭಾಗವಾರು ತುಲನೆ ಮಾಡಿದಾಗ ಉತ್ತರ ಕರ್ನಾಟಕಕ್ಕೆ ಸದಾ ಅನ್ಯಾಯವಾಗುತ್ತಲೇ ಬಂದಿದೆ. ಇಂತಹ ಅನ್ಯಾಯವನ್ನು ಸರಿದೂಗಿಸುವ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು. ಪಾಲಕರು ಕೇವಲ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗದೆ ಪ್ರಾಥಮಿಕ ಶಿಕ್ಷಣದ ಅವಧಿಯಲ್ಲಿ ತಮ್ಮ ಮಕ್ಕಳನ್ನು ಕನಿಷ್ಠ ಐದನೇ ತರಗತಿಯವರೆಗಾದರೂ ಕಡ್ಡಾಯವಾಗಿ ಕನ್ನಡ ಕಲಿಸಬೇಕು. ಸರಕಾರ ಕರ್ನಾಟಕದ ಎಲ್ಲ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರ ಕಡ್ಡಾಯಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಎಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಆರ್ ಹೆಗ್ಗಣದೊಡ್ಡಿ ಮಾತನಾಡಿ ೧೧೨ ಸಂವಸ್ತ್ರಗಳನ್ನು ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತು ಕೇವಲ ೪ ಸದಸ್ಯರೊಂದಿಗೆ ಪ್ರಾರಂಭವಾಗಿ ಇಂದು ಹೆಮ್ಮರವಾಗಿ ರಾಜ್ಯಾದ್ಯಂತ ತನ್ನದೇ ಆದ ಗಟ್ಟಿ ಛಾಪು ಮೂಡಿಸಿ ನಾಡು-ನುಡಿ , ನೆಲ-ಜಲ ರಕ್ಷಣೆಗೆ ಕಟಿಬದ್ಧವಾಗಿದೆ ಎಂದರು.
ಕಸಾಪ ತಾಲೂಕ ಅಧ್ಯಕ್ಷ ವೈ ಸಿ ಮಯೂರ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಗೌರವ ಕಾರ್ಯದರ್ಶಿ ಆನಂದ್ ಶಾಬಾದಿ ಸ್ವಾಗತಿಸಿ ನಿರೂಪಿಸಿದರು. ರವಿ ಹೊಳಿ ವಂದಿಸಿದರು.ಕಾರ್ಯಕ್ರಮದ ವೇದಿಕೆ ಮೇಲೆ ಸಿದ್ದಣ್ಣ ಕೂಚಬಾಳ, ಬಿಸಿಯೂಟದ ಅಧಿಕಾರಿ ಡೋಣೂರ, ಶಾಂತಲಾ ಮೋಸಲಗಿ ಇದ್ದರು. ಕಾರ್ಯಕ್ರಮದಲ್ಲಿ ರಾಜಶೇಖರ್ ನರಗೋಡಿ, ಶಾಂತು ರಾಣಗೋಳ, ಜೈ ಭೀಮ್ ತಳಕೇರಿ, ವಿಠ್ಠಲ್ ಬಾಗೇವಾಡಿ ಸೇರಿದಂತೆ ಹಲವರಿದ್ದರು.
