ವಿಜಯ ಸಿಂಧೂರ ತಾಳಿಕೋಟೆ
ತಾಳಿಕೋಟೆ:-ಮೇ 8 ರಂದು ವಿಜಯಪುರ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆಯಲಿರುವ 4ನೇ ರಾಜ್ಯಮಟ್ಟದ ರೈತ ಜಾಗೃತಿ ಸಮಾವೇಶವನ್ನು ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ನಡಹಳ್ಳಿ ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೊತೆಗೆ, ರೈತರು ಬೆಳೆದ ಕಬ್ಬಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲವೆಂಬುದು ಗಂಭೀರ ಸಮಸ್ಯೆಯಾಗಿದ್ದು, ಸರಕಾರಿ ವೇಟ ಬ್ರಿಜ್ (ತೂಕದ ಸೇತುವೆ ಅಥವಾ ವಾಹನ ತೂಕದ ಯಂತ್ರ )ವ್ಯವಸ್ಥೆ ಇಲ್ಲದ ಕಾರಣ ರೈತರು ಹೆಚ್ಚುವರಿ ವೆಚ್ಚ ಭರಿಸಬೇಕಾಗುತ್ತಿದೆ ಎಂದು ತಿಳಿಸಿದರು.ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮತ್ತು ರೈತರ ಹಕ್ಕುಗಳಿಗಾಗಿ ಒತ್ತಾಯಿಸಲು ಈ ಸಮಾವೇಶವನ್ನು ಆಯೋಜಿಸಲಾಗಿದ್ದು, ಸಭೆಯಲ್ಲಿ ರೈತರ ಸಮಸ್ಯೆಗಳ ಕುರಿತು ವಿಶ್ಲೇಷಣಾತ್ಮಕ ಚರ್ಚೆ ನಡೆಯಲಿದೆ ಎಂದು ಹೇಳಿದರು.ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಮಾವೇಶದ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಶ್ರೀಶೈಲ ವಾಲಿಕಾರ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಅವಟಿ, ತಾಲೂಕು ಸಂಚಾಲಕ ಲಿಂಗರಾಜ ಮೇಟಿ, ಹಸನ್ ಹಳ್ಳದಮನಿ, ಶಂಕ್ರಪ್ಪ ಟಕ್ಕಳಕಿ, ಮಲ್ಲಪ್ಪ ಮುದನೂರ, ಅಪ್ಪಯ್ಯ ಕರಕಳ್ಳಿಮಠ, ಶರಣು ಸಿಂದಗಿ, ಸಿದ್ದಪ್ಪ ತಳವಾರ, ಮುರ್ತುಜಾ ವಿಜಾಪುರ, ಲಕ್ಷ್ಮೀಂಬಾಯಿ ಸಜ್ಜನ, ಬೋರಮ್ಮ ಕುಂಬಾರ, ಸುಧಾಮಡ್ಡಿ ಶಾಂತಮ್ಮ ಹಿರೇಮಠ, ಜನತಬಿ ಬಿದರಿ, ರೇಣುಕಾ ಕುಂಬಾರ ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
