ವಿಜಯ ಸಿಂಧೂರ ತಾಳಿಕೋಟೆ
ತಾಳಿಕೋಟೆ: ಪಟ್ಟಣದ ದಿ. ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ ಕಳೆದ ಹಣಕಾಸು ವರ್ಷದ ಅಂತ್ಯದ ಆರ್ಥಿಕ ವರದಿಯನ್ನು ಪ್ರಕಟಿಸಿದ್ದು, ಬ್ಯಾಂಕ್ ಉತ್ತಮ ಆರ್ಥಿಕ ಸಾಧನೆ ದಾಖಲಿಸಿದೆ.ಬ್ಯಾಂಕಿನ ಒಟ್ಟು ಎನ್.ಪಿ.ಎ. ಪ್ರಮಾಣವನ್ನು ಶೇ. 1.68ಕ್ಕೆ ಹಾಗೂ ನಿವ್ವಳ ಎನ್.ಪಿ.ಎ. ಅನ್ನು ಶೂನ್ಯ (0.00%) ಮಟ್ಟಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿರುವುದು ಗಮನಾರ್ಹ ಸಾಧನೆಯಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ದೇವಿದಾಸ ಮಹೀಂದ್ರಕರ ತಿಳಿಸಿದರು.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಎಲ್ಲಾ ಆರ್ಥಿಕ ಮಾನದಂಡಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಕಳೆದ ಸಾಲಿನಲ್ಲಿ ರೂ. 50.13 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.ವರ್ಷಾಂತ್ಯದ ವೇಳೆಗೆ ಬ್ಯಾಂಕಿನ ಒಟ್ಟು ಠೇವಣಿಗಳು ರೂ. 93.59 ಕೋಟಿಗೆ, ಸಾಲ ಮತ್ತು ಮುಂಗಡಗಳು ರೂ. 59.32 ಕೋಟಿಗೆ ಏರಿಕೆಯಾಗಿದೆ. ಜೊತೆಗೆ, ದುಡಿಯುವ ಬಂಡವಾಳವು ರೂ. 101.70 ಕೋಟಿಗೆ ತಲುಪಿದೆ ಎಂದು ವಿವರಿಸಿದರು.ಗ್ರಾಹಕರು ಮತ್ತು ಸದಸ್ಯರು ಬ್ಯಾಂಕ್ ಮೇಲಿಟ್ಟಿರುವ ವಿಶ್ವಾಸವೇ ಈ ಸಾಧನೆಗೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಅಭೂತಪೂರ್ವ ಆರ್ಥಿಕ ಸಾಧನೆಗೆ ಸಹಕರಿಸಿದ ಎಲ್ಲಾ ಸದಸ್ಯರು, ಠೇವಣಿದಾರರು ಮತ್ತು ಗ್ರಾಹಕರಿಗೆ ಬ್ಯಾಂಕಿನ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಚಂದ್ರಕಲಾ ರ. ಹಂಚಾಟೆ, ನಿರ್ದೇಶಕರಾದ ಅರವಿಂದ ಕೃ. ಹಂಚಾಟೆ, ಸಂಜಯ ಕೃ. ಹಂಚಾಟೆ, ವಿಜಯ ಧ. ದರ್ಜಿ, ದೇವಿಂದ್ರ ತಿ. ಹಂಚಾಟೆ, ಅಜಯ ನಾ. ಮಹೀಂದ್ರಕರ, ಶ್ರೀನಿವಾಸ ತಿ. ಹಂಚಾಟೆ, ಸವಿತ ಪ. ಹಂಚಾಟೆ ಹಾಗೂ ಪ್ರಧಾನ ವ್ಯವಸ್ಥಾಪಕರಾದ ಯಲ್ಲು ನಾ. ಮಹೀಂದ್ರಕರ ಉಪಸ್ಥಿತರಿದ್ದರು.
