ವಿಜಯ ಸಿಂಧೂರ, ಗಜೇಂದ್ರಗಡ
ಸಾಮೂಹಿಕ ವಿವಾಹಗಳ ಕುರಿತು ಕೀಳರಿಮೆ ವ್ಯಕ್ತಪಡಿಸದೇ ಮೇಲರಿಮೆ ಬೆಳೆಸಿಕೊಳ್ಳಬೇಕು.ಸರ್ವಧರ್ಮಗಳ ಸಾಮೂಹಿಕ ವಿವಾಹಗಳು ಸ್ವಾಭಿಮಾನದ ಸಂಕೇತವಾಗಿದೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಅವರು ಸೋಮವಾರ ಗಜೇಂದ್ರಗಡ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಸರ್ವ ಧರ್ಮಗಳ ಸಾಮೂಹಿಕ ವಿವಾಹದಲ್ಲಿ ನವ ಜೋಡಿಗಳಿಗೆ ಶುಭ ಹಾರೈಸಿ ಮಾತನಾಡಿದರು.
”ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ಒಂದು ಭಿನ್ನ ಪರಂಪರೆಯಿದ್ದು, ನಮ್ಮ ಜನಪದರು ದವಸ ಧಾನ್ಯಗಳ ಬಗ್ಗೆ ಅಷ್ಟಾಗಿ ಪದ ಕಟ್ಟಿ ಹಾಡಲಿಲ್ಲ. ಬೆಳಗಾಗ್ಗೆ ಎದ್ದು ಎಳ್ಳುಜೀರಿಗೆ ಬೆಳೆವ ಭೂತಾಯಿಯನ್ನು ಅರೆಗಳಿಗೆಯಾದರೂ ನೆನೆಯಬೇಕು ಎಂದು ಹಾಡಿದ್ದಾರೆ. ಇದರ ಉದ್ದೇಶ ಆರಂಭದಿಂದ ಅಂತಿಮದವರೆಗೂ ಪರಸ್ಪರ ದ್ವೇಷಿಸದೇ ಸುಖದ ಜೀವನ ನಡೆಸುವುದಾಗಿದೆ, ಸಾಮೂಹಿಕ ವಿವಾಹ ಆಗುವುದು ಎಂದರೆ ಇಂದಿನ ದಿನಗಳಲ್ಲಿ ಕೀಳು ಎಂಬ ಭಾವನೆಯಿದೆ, ಅದು ನಿಜಕ್ಕೂ ತಪ್ಪು ಕಲ್ಪನೆ, ಶರಣರ ಜಯಂತಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಠ ಮಾನ್ಯಗಳು ಆಯೋಜಿಸುವ ಸಾಮೂಹಿಕ ವಿವಾಹಗಳು ಮಾನವರ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿಯೊಬ್ಬರು ಇದರಲ್ಲಿ ಪಾಲ್ಗೊಂಡು ವಿವಾಹವಾಗುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು,” ಎಂದರು

12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಸಂಸ್ಕೃತಿಯನ್ನು ನಮ್ಮ ಮಠ ಮಾನ್ಯಗಳು ಇಂಥ ಸಾಮೂಹಿಕ ವಿವಾಹದಂತ ಸಾಮಾಜಿಕ ಕಾರ್ಯಕ್ರಮಗಳ ಮಾದರಿಯಲ್ಲಿ ಆಯೋಜನೆ ಮಾಡಿಕೊಂಡು ಬರುತ್ತಿವೆ, ಗ್ರಾಮಸ್ಥರ ಸಾಮಾಜಿಕ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಕೆ.ಸಿ.ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್.ಪಾಟೀಲ ಮಾತನಾಡಿ, ಸಾಮೂಹಿಕ ವಿವಾಹಗಳು ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದಲ್ಲದೇ, ಗುರು, ಹಿರಿಯರ ಸಮ್ಮುಖದಲ್ಲಿ ನಡೆಯುವುದರಿಂದ ದಂಪತಿಗಳಲ್ಲದೆ ಪಾಲಕರೂ ಆತಂಕ ಮುಕ್ತತೆಯಿಂದ ಇರಲು ಸಾಧ್ಯವಾಗಿದೆ. ಬಡವರ ಪಾಲಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ ಎಂದರು.

ಮಿತ ಸಂತಾನದೊಂದಿಗೆ ಸಾಮರಸ್ಯದ, ಸುಖಕರ ಜೀವನ ನಡೆಸಿ, ಜೀವನದಲ್ಲಿ ಸಾರ್ಥಕತೆ ಮೆರೆಯಿರಿ ಎಂದು ಹೇಳಿದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ ಮಾತನಾಡಿ, ಇಂದು ವಿಶ್ವ ಗುರು ಬಸವಣ್ಣನವರ ಜಯಂತಿ ಸಂದರ್ಭದಲ್ಲಿಯ ವಿವಾಹ ಮಹೂರ್ತದಲ್ಲಿ ನಿಮ್ಮ ದಾಂಪತ್ಯ ಜೀವನ ಆರಂಭವಾಗಿದೆ. ಯಶಸ್ವಿ, ಸುಖಕರ ಜೀವನ ನಿಮ್ಮದಾಗಲಿ ಎಂದರು.
ಈ ಸಮಯದಲ್ಲಿ ಶಿವರಾಜ್ ಘೋರ್ಪಡೆ, ಉಮೇಶ ರಾಠೋಡ, ಹನುಮಂತ ರಾಮಜಿ, ಭೀಮಣ್ಣ ತಳವಾರ, ನಾಗಯ್ಯ ಹಿರೇಮಠ ರಾಚಯ್ಯ ಬಾಳಿಕಾಯಿಮಠ ಬಾಲಚಂದ್ರ ವಾಲ್ಮೀಕಿ, ಯೂಸುಫ್ ಇಟಗಿ,ಕುಮಾರ ರಾಠೋಡ, ಮುತ್ತಪ್ಪ ಮಾಳವತ್ತ , ಕೊಟ್ರೇಶ್ ಹೂಗಾರ, ವೀರಯ್ಯ ಬಣ್ಣದಮಠ, ವೀರಯ್ಯ ಬಾಳಿಕಾಯಿಮಠ ಇತರರು ಉಪಸ್ಥಿತರಿದ್ದರು
