ಸರ್ಕಾರಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆ

ವಿಜಯ ಸಿಂಧೂರ ತಾಳಿಕೋಟೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ತಾಲೂಕ ಘಟಕ ತಾಳಿಕೋಟಿ ವತಿಯಿಂದ ಪದಾಧಿಕಾರಿಗಳ ಮಾಸಿಕ ಸಭೆ ಭಾನುವಾರ ಸ್ಥಳೀಯ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಸಿ.ಎಂ. ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಯಿತು. ಪ್ರಧಾನ ಕಾರ್ಯದರ್ಶಿ ಜಿ.ಎಸ್. ದೇಸಾಯಿ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.ಸಭೆಯಲ್ಲಿ ಸಂಘದ ಅಭಿವೃದ್ಧಿ ಹಾಗೂ ನಿವೃತ್ತ ನೌಕರರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಲಾಯಿತು. ಮುಖ್ಯವಾಗಿ ಸಂಘದ ದಾಖಲೆಗಳು ಮತ್ತು ಇತರೆ ಕಾಗದಪತ್ರಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಹಾಗೂ ನಿಯಮಿತ ಸಭೆಗಳನ್ನು ನಡೆಸಲು ಸ್ವಂತ ಕಟ್ಟಡ ನಿವೇಶನ ಒದಗಿಸುವಂತೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.ಹಾಗೆಯೇ 60ರಿಂದ 70 ವರ್ಷದ ನಿವೃತ್ತ ನೌಕರರಿಗೆ ಆರೋಗ್ಯ ಸಂಬಂಧಿತ “ಸಂಧ್ಯಾಕಿರಣ” ಮತ್ತು “ಆರೋಗ್ಯ ಸಂಜೀವಿನಿ” ಯೋಜನೆಗಳ ಪ್ರಮಾಣ ಪತ್ರಗಳನ್ನು ಸರ್ಕಾರದಿಂದ ಪಡೆಯುವ ಬಗ್ಗೆ ಚರ್ಚಿಸಲಾಯಿತು. 70ರಿಂದ 80 ವರ್ಷದ ನಿವೃತ್ತ ನೌಕರರಿಗೆ “ಆಯುಷ್ಮಾನ್ ಭಾರತ” (ಆರೋಗ್ಯ ಭಾಗ್ಯ) ಯೋಜನೆಯನ್ನು ವಿಸ್ತರಿಸಬೇಕೆಂದು ಆಗ್ರಹಿಸಲಾಯಿತು.ಇದಲ್ಲದೆ, ನಿವೃತ್ತ ನೌಕರರ ಶವ ಸಂಸ್ಕಾರಕ್ಕೆ ಸರ್ಕಾರದಿಂದ ಅನುದಾನ ನೀಡುವಂತೆ ಒತ್ತಾಯಿಸಲಾಯಿತು. ಸಂಘದ ಬಲವರ್ಧನೆಗಾಗಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲು ಎಲ್ಲರೂ ಕೈಜೋಡಿಸಬೇಕೆಂದು ಅಧ್ಯಕ್ಷರು ಮನವಿ ಮಾಡಿದರು.ಕಾರ್ಯಕ್ರಮವನ್ನು ಎಂ.ಎಸ್. ಹುಲ್ಲೂರ್ ನಿರ್ವಹಿಸಿದರು. ಉಪಾಧ್ಯಕ್ಷರಾದ ಬಿ.ಜಿ. ಚಿತ್ತಾಪುರ ವಂದನಾರ್ಪಣೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಶೋಕ ಕುಲಕರಣಿ, ಶ್ರೀಧರ್ ಐತಾಳ್, ಎಂ.ಬಿ. ಮುರಾಳ, ಎಲ್.ಆರ್. ಸಮಾಜಕಟ್ಟಿ, ಹುಲುಗಪ್ಪ ಕಟ್ಟಿಮನಿ, ಸಿ.ಎಸ್. ಗೋಗಿ, ಐ.ಆರ್. ಕಲಬುರ್ಗಿ, ಜಿ.ಎಸ್. ಜಂಬಲದಿನ್ನಿ, ಬಾಲಕೃಷ್ಣ ಜಿಂಗಾಡಿ ಸೇರಿದಂತೆ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.ಸಭೆಯ ಅಂತ್ಯದಲ್ಲಿ ಸಂಘ ಚಿರಾಯುವಾಗಲೆಂದು ಜಗನ್ಮಾತೆ ಕಾಳಿಕಾ ದೇವಿಗೆ ಎಲ್ಲರೂ ಪ್ರಾರ್ಥಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!