ವಿಜಯ ಸಿಂಧೂರ ರೋಣ
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ತಾಲೂಕ ಘಟಕವು ಮೇ 20 ರಂದು ಮುಷ್ಕರ ಹಮ್ಮಿಕೊಂಡಿದೆ ಎಂದು ಡಾ.ಸಂಜಯ ರಡ್ಡೇರ ಹೇಳಿದರು.
ಅವರು ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು

ಔಷಧಗಳ ಆನ್‍ಲೈನ್ ಮಾರಾಟ ನಿಲ್ಲಿಸುವುದು. ಕಾರ್ಪೋರೇಟ್ ವಿನಾಯಿತಿ ನಿಲ್ಲಿಸುವುದು. ನಕಲಿ ಔಷಧ ದೂರವಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದರು.
ಬೆಳಿಗ್ಗೆ 11ಕ್ಕೆ ಮಿನಿ ವಿಧಾನಸೌಧದ ತಾಲೂಕಾಡಳಿತ ಭವನದ ಮುಂದೆ ನಡೆಯುವ ಪ್ರತಿಭಟನೆಯಲ್ಲಿ ಎಲ್ಲಾ ಔಷಧ ವ್ಯಾಪಾರಿಗಳು ಅಂಗಡಿ ಮುಚ್ಚಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಈ ಮುಷ್ಕರವು ರಾಷ್ಟ್ರದಾದ್ಯಂತ ನಡೆಯಲಿದ್ದು, ಸಂಘದ ಎಲ್ಲ ಸದಸ್ಯರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ದೇಶದಲ್ಲಿ 12.40 ಲಕ್ಷಕ್ಕೂ ಹೆಚ್ಚಕ್ಕೂ ಔಷಧ ವ್ಯಾಪಾರಿಗಳಿದ್ದು, ಆನ್‍ಲೈನ್ ಪೋರ್ಟಲ್‍ಗಳ ಅನಿಯಂತ್ರಿತವಾಗಿ ಕಾರ್ಯ ನಿರ್ವಹಿಸುವುದರಿಂದ ಅದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗಿದೆ ಎಂದರು.ಅಕ್ರಮಣಕಾರಿ ಬೆಲೆ ನಿಗದಿ, ತುರ್ತು ಅಧಿಸೂಚನೆಗಳನ್ನು ಹಿಂತೆಗೆದುಕೊಳ್ಳಬೇಕು. ಕೋವಿಡ್ ಸಮಯದಲ್ಲಿ ಮಾಡಲಾದ ಅಧಿಸೂಚನೆ ಮುಂದುವರಿಸಿದ್ದು, ಅದನ್ನು ತಕ್ಷಣವೇ ರದ್ದುಗೊಳಿಸಬೇಕು. ಸರ್ಕಾರ ಸೂಕ್ತ ಕ್ರಮಕೈಗೊಳ್ಳದಿದ್ದರೆ ಅನಿರ್ದಿಷ್ಠಾವಧಿ ಮುಷ್ಕರ ಮಾಡಲಾಗುವುದು ಎಂದು ಹೇಳಿದರು.
ಮಹಾದೇವಗೌಡ ಲಿಂಗನಗೌಡ್ರ ಮಾತನಾಡಿ, ಹೋರಾಟ ಅನಿವಾರ್ಯವಾಗಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್‌ಆರ್ 817 ಹಾಗೂ ಕೋವಿಡ್ ಅವಧಿಯಲ್ಲಿ ತರಲಾಗಿದ್ದ ಕೆಲವು ನಿಯಮಗಳನ್ನು ತಕ್ಷಣ ಹಿಂಪಡೆಯಬೇಕು. ಆನ್‌ಲೈನ್ ಫಾರ್ಮಸಿಗಳ ಅನಿಯಂತ್ರಿತ ವ್ಯವಹಾರದಿಂದ ಸಾಂಪ್ರದಾಯಿಕ ಔಷಧ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇ-ಪೋರ್ಟಲ್‌ಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿ ನಕಲಿ ವೈದ್ಯರ ಪ್ರಿಸ್ಕ್ರಿಪ್ಷನ್‌ಗಳನ್ನು ಸೃಷ್ಟಿಸಿ ಔಷಧಗಳನ್ನು ಪಡೆಯಲಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ ಎಂದರು
ಅಮಲು ಪದಾರ್ಥಗಳ ಗುಂಪಿಗೆ ಸೇರಿದ ಔಷಧಗಳು ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಾಗುತ್ತಿರುವುದರಿಂದ ಯುವ ಪೀಳಿಗೆ ದುಶ್ಚಟಗಳಿಗೆ ಒಳಗಾಗುವ ಅಪಾಯ ಹೆಚ್ಚಾಗಿದೆ. ಔಷಧಗಳು ಸಾಮಾನ್ಯ ಗ್ರಾಹಕ ವಸ್ತುಗಳಲ್ಲ. ಅವುಗಳನ್ನು ಅರ್ಹ ಫಾರ್ಮಾಸಿಸ್ಟ್‌ಗಳ ಸಮ್ಮುಖದಲ್ಲಿ, ನಿಗದಿತ ಉಷ್ಣಾಂಶ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಿ ವಿತರಿಸಬೇಕು. ಆದರೆ ಆನ್‌ಲೈನ್ ಮಾರಾಟದಲ್ಲಿಇಂತಹ ನಿಯಮಗಳು ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಮೇ 20 ರಂದು ತಾಲೂಕಿನ ಎಲ್ಲ ಹೋಲ್‌ಸೇಲ್ ಹಾಗೂ ರಿಟೇಲ್ ಔಷಧ ಅಂಗಡಿಗಳು 24 ಗಂಟೆಗಳ ಕಾಲ ಸಂಪೂರ್ಣ ಬಂದ್ ಆಗಲಿವೆ. ಸಾರ್ವಜನಿಕರು ಅಗತ್ಯ ಔಷಧಗಳನ್ನು ಮುಂಚಿತವಾಗಿಯೇ ಖರೀದಿಸಿ ಸಹಕರಿಸಬೇಕು ಎಂದು ಹೇಳಿದರು
ಈ ಸಮಯದಲ್ಲಿ ಚನ್ನಬಸಪ್ಪ ರಡ್ಡೇರ, ಭಾವಿ, ಬಸವರಾಜ ಗಡಗಿ ಸೇರಿದಂತೆ ಅನೇಕರು ಇದ್ದರು.
