ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಹಾವಳಿ

ತಾಳಿಕೋಟೆ: ಪಟ್ಟಣದಲ್ಲಿ ಕೆಲವು ವಸತಿ ಶಾಲೆಗಳು ಅಗತ್ಯ ಪರವಾನಗಿಗಳು ಹಾಗೂ ನಿಗದಿತ ನಿಯಮಗಳನ್ನು ಪಾಲಿಸದೆ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ ಹಾಗೂ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ನೆಪದಲ್ಲಿ ಅನಧಿಕೃತ ತರಬೇತಿ ಕೇಂದ್ರಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಕಾಯಂ ಶಿಕ್ಷಕರಾಗಿರುವ ಬಹುತೇಕರು ಈ ಕೇಂದ್ರಗಳನ್ನು ನಡೆಸುತ್ತಿದ್ದಾರೆ.

ತಾಳಿಕೋಟೆಯ ದೇವರ ಹಿಪ್ಪರಗಿ ರಸ್ತೆಯ, ಜ್ಞಾನ ಸಮೃದ್ಧಿ ಪೂರ್ವ ಪ್ರಾಥಮಿಕ ಶಾಲೆ ಹಾಗೂ ನವೋದಯ, ಸೈನಿಕ ತರಬೇತಿ ಕೇಂದ್ರ ಸೇರಿದಂತೆ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಪರವಾನಗಿ ಪಡೆಯದೇ ಅನಧಿಕೃತವಾಗಿ ಈ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಇಲ್ಲಿ ನವೋದಯ, ಸೈನಿಕ, ರಾಜ್ಯ ಪಠ್ಯಕ್ರಮದ ಮೊರಾರ್ಜಿ ದೇಸಾಯಿ ಹಾಗೂ ಇತರೆ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸಲಾಗುತ್ತದೆ.

ಗೈರಾದರೂ ಹಾಜರಿ: ರಜೆ ಅವಧಿಯಲ್ಲಿ ಈ ಕೇಂದ್ರಗಳಲ್ಲಿ ಮಕ್ಕಳಿಗೆ ಕೋಚಿಂಗ್ ನೀಡಲಾಗುವುದು ಎಂದು ಹೇಳಲಾಗುತ್ತದೆ. ಆದರೆ, ಇದು ನಿಜವಲ್ಲ. ಈ ಕೇಂದ್ರಗಳು ಪೂರ್ಣಾವಧಿ ಕಾರ್ಯನಿರ್ವ ಹಿಸುತ್ತಿವೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳೇ ಈ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಾರೆ. ಮಕ್ಕಳು ಗೈರಾದರೂ ಶಾಲೆಗಳ ದಾಖಲಾತಿಯಲ್ಲಿ ಮಾತ್ರ ಅಲ್ಲಿನ ಶಿಕ್ಷಕರು ನಿತ್ಯವೂ ಹಾಜರಿ ಹಾಕುವುದು ಸಾಮಾನ್ಯವಾಗಿದೆ.ಬಾಡಿಗೆ ಮನೆ, ಬಯಲು ಬಹಿರ್ದೆಸೆ: ಕೋಚಿಂಗ್ ಕೇಂದ್ರಗಳಲ್ಲಿನ ಸೌಕರ್ಯದ ಬಗ್ಗೆ ಆರೋಪಗಳು ಕೇಳಿಬಂದಿವೆ. ಪಟ್ಟಣದಲ್ಲಿ ಕೆಲವು ಕೇಂದ್ರಗಳು ಕೋಳಿ ಗೂಡಿನಂತಿವೆ. ಇನ್ನು ಕೆಲವು ಸಣ್ಣ ಬಾಡಿಗೆ ಮನೆಯಲ್ಲಿ ನಡೆಯುತ್ತಿವೆ. 50ರಿಂದ 80ಕ್ಕೂ ಅಧಿಕ ಮಕ್ಕಳನ್ನು ಕೊಟ್ಟಿಗೆಯಲ್ಲಿ ದನಗಳಂತೆ ಕೂಡಿ ಹಾಕಲಾಗುತ್ತದೆ ಎಂಬ ದೋಪ ಇದೆ.

ಮೋಸದ ಜಾಹೀರಾತುಗಳು

ಇತ್ತೀಚಿನ ದಿನಗಳಲ್ಲಿ ಕೆಲವು ಕೋಚಿಂಗ್ ಸೆಂಟರ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳು ತಮಗೆ ಸರ್ಕಾರ ಅಥವಾ ಸಂಬಂಧಿತ ಇಲಾಖೆಯ ಮಾನ್ಯತೆ ಇದೆ ಎಂದು ಜಾಹೀರಾತುಗಳ ಮೂಲಕ ಪ್ರಚಾರ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳು ವ್ಯಕ್ತವಾಗುತ್ತಿವೆ. ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಸಂಸ್ಥೆಗೆ ಪ್ರವೇಶ ಪಡೆಯುವ ಮೊದಲು ಅದರ ಮಾನ್ಯತೆ, ನೋಂದಣಿ, ಬೋಧಕರ ಅರ್ಹತೆ ಹಾಗೂ ಅಗತ್ಯ ಅನುಮತಿಗಳ ಬಗ್ಗೆ ಸಂಬಂಧಿತ ಇಲಾಖೆಯಿಂದ ಅಥವಾ ಅಧಿಕೃತ ದಾಖಲೆಗಳ ಮೂಲಕ ಪರಿಶೀಲಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ಕೇವಲ ಆಕರ್ಷಕ ಜಾಹೀರಾತುಗಳು, 100% ಫಲಿತಾಂಶದ ಭರವಸೆ ಅಥವಾ ಸುಳ್ಳು ಹೇಳಿಕೆಗಳನ್ನು ನಂಬಿ ಪ್ರವೇಶ ಪಡೆಯಬಾರದು. ಅಗತ್ಯ ಪರವಾನಗಿ ಅಥವಾ ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದರೆ ಅಥವಾ ಮಾನ್ಯತೆ ಇದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದರೆ, ಸಂಬಂಧಿತ ಅಧಿಕಾರಿಗಳು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು.ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ಜಾಹೀರಾತು ಅಥವಾ ಸಂಸ್ಥೆಯ ಬಗ್ಗೆ ಮಾಹಿತಿ ಇದ್ದಲ್ಲಿ ಸಂಬಂಧಿತ ಶಿಕ್ಷಣ ಇಲಾಖೆ, ಸ್ಥಳೀಯ ಆಡಳಿತ ಅಥವಾ ಗ್ರಾಹಕರ ರಕ್ಷಣಾ ಪ್ರಾಧಿಕಾರಕ್ಕೆ ದೂರು ನೀಡಿ, ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಸಹಕರಿಸಬೇಕು.

ಅಗ್ನಿಶಾಮಕ ಹಾಗೂ ಸುರಕ್ಷತಾ ನಿಯಮಗಳ ಉಲ್ಲಂಘನೆ

ಅಗ್ನಿಶಾಮಕ ಇಲಾಖೆಯ ಅನುಮೋದನೆ ಅಥವಾ ಅಗತ್ಯ ಸುರಕ್ಷತಾ ವ್ಯವಸ್ಥೆಗಳಿಲ್ಲದೆ, ಕಿರಿದಾದ ಹಾಗೂ ತುರ್ತು ನಿರ್ಗಮನ ವ್ಯವಸ್ಥೆಯಿಲ್ಲದ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸುವುದು ವಿದ್ಯಾರ್ಥಿಗಳ ಜೀವ ಸುರಕ್ಷತೆಗೆ ಗಂಭೀರ ಅಪಾಯವನ್ನು ಉಂಟುಮಾಡುತ್ತದೆ. ಅಗ್ನಿಶಾಮಕ ಉಪಕರಣಗಳು, ತುರ್ತು ನಿರ್ಗಮನ ದ್ವಾರ, ಸಮರ್ಪಕ ಗಾಳಿ-ಬೆಳಕು ಹಾಗೂ ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದು ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಜವಾಬ್ದಾರಿಯಾಗಿದೆ. ಇಂತಹ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!