ರೋಣ:ಬೇಸಿಗೆ ಸಂದರ್ಭದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಅಭಾವ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಬೇಸಿಗೆ ಸಾಕಷ್ಟು ತೀವೃತರಹದಲ್ಲಿರುವದರಿಂದ ಕುಡಿಯುವ ನೀರಿನ ತೊಂದರೆ ಉಂಟಾಗಬಹುದಾದ ಗ್ರಾಮಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಈಗಲೇ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಖಾಸಗಿ ಬೋರ್ ವೆಲ್, ಟ್ಯಾಂಕರ್ ಇನ್ನಿತರ ಮೂಲಕ ಸಮಸ್ಯೆ ಇರುವ ಗ್ರಾಮಗಳಲ್ಲಿ ಕುಡಿಯುವ ನೀರು ಒದಗಿಸಬೇಕು. ಕೊಳವೆಬಾವಿಗಳಲ್ಲಿ ಇನ್ನಷ್ಟು ನೀರು ಪಡೆಯಲು ಸಾಧ್ಯ ಇರುವ ಬಗ್ಗೆ ಪರಿಶೀಲಿಸಬೇಕು ಎಂದು ರಾಜ್ಯ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷ,ಶಾಸಕ ಜಿ.ಎಸ್.ಪಾಟೀಲ ಸೂಚನೆ ನೀಡಿದರು.

ಅವರು ಭಾನುವಾರ ಪಟ್ಟಣದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ರೋಣ ವಿಧಾಸಭಾ ಮತಕ್ಷೇತ್ರದ ವ್ಯಾಪ್ತಿಯ ಟಾಸ್ಕ ಪೊರ್ಸ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾನುವಾರುಗಳಿಗೆ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಿದೆ. ಜಾನುವಾರುಗಳಿಗೆ ನೀರು ಸಂಗ್ರಹಿಸುವ ಕಟ್ಟೆಗಳನ್ನು ಸ್ವಚ್ಚ ಪಡಿಸಿ ಕುಡಿಯುವ ನೀರು ತುಂಬಿಸಬೇಕು. ಮೇವಿನ ಲಭ್ಯತೆ ಸಾಕಷ್ಟು ಪ್ರಮಾಣದಲ್ಲಿ ಇರಬೇಕು. ಎಲ್ಲಿಯೂ ಮೇವಿಗೆ ಕೊರತೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು
ಪಟ್ಟಣ ಪ್ರದೇಶಗಳಲ್ಲಿಯೂ ಕುಡಿಯುವ ನೀರು ಸರಬರಾಜಿಗೆ ಯಾವುದೇ ತೊಂದರೆ ಇರದಂತೆ ಗಮನಹರಿಸಬೇಕು. ಲಭ್ಯವಿರುವ ನೀರಿನ ಮೂಲಗಳಿಂದ ಅಗತ್ಯಕ್ಕನುಗುಣವಾಗಿ ನೀರು ಸರಬರಾಜು ಮಾಡಬೇಕು. ಹಲವು ವಾರ್ಡಗಳಿಂದ ನೀರಿನ ಸಮಸ್ಯೆ ಇರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತರುತ್ತಿದ್ದಾರೆ. ಅಧಿಕಾರಿಗಳು ಭೇಟಿ ನೀಡಿ ಕೂಡಲೇ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು. ಪರ್ಯಾಯ ವ್ಯವಸ್ಥೆಗಳ ಮೂಲಕವು ನೀರು ಒದಗಿಸಬೇಕು ಎಂದರು.

ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ದುರಸ್ತಿ ಅಗತ್ಯವಿದ್ದರೆ ಶೀಘ್ರ ಸರಿಪಡಿಸಿ ಉಪಯೋಗವಾಗುವಂತೆ ಚಾಲನೆಗೊಳಿಸಬೇಕು. ಸ್ವಚ್ಚತೆ ಕೆಲಸಗಳು ಪರಿಣಾಮಕಾರಿಯಾಗಿ ಆಗಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.ತೋಟಗಾರಿಕೆ, ಕೃಷಿ ಬೆಳೆ ಚಟುವಟಿಕೆಗಳ ನಿರ್ವಹಣೆಗೆ ಯಾವುದೇ ಸಮಸ್ಯೆಯಾಗಬಾರದು. ಬೇಸಿಗೆ ವೇಳೆ ಕಾಡ್ಗಿಚ್ಚು, ಆಕಸ್ಮಿಕ ಬೆಂಕಿ ಅನಾಹುತಗಳು ಸಂಭವಿಸದಂತೆ ನಿರಂತರವಾಗಿ ನಿಗಾ ವಹಿಸಬೇಕು. ಅರಣ್ಯ ಇಲಾಖೆ, ಅಗ್ನಿಶಾಮಕ ಅಧಿಕಾರಿಗಳು ಕಟ್ಟೆಚ್ಚೆರದಿಂದ ಇರಬೇಕು ಎಂದರು.
ಚಿಕ್ಕಮಣ್ಣೂರ ಗ್ರಾಪಂ ನೀರಿನ ಸಮಸ್ಯೆ ತಕ್ಷಣ ಪರಿಹರಿಸಿ ಚಿಕ್ಕಮಣ್ಣೂರ ಗ್ರಾಮ ಪಂಚಾಯತ ವ್ಯಪ್ತಿಯ ಬಾಸಲಾಪೂರ,ಹಿರೇಮಣ್ಣೂರ ಗ್ರಾಮಗಳಲ್ಲಿ ಉಂಟಾಗಿರುವ ತೀವ್ರ ನೀರಿನ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವದಿಂದ ಜನರು ಹಾಗೂ ಜಾನುವಾರಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಗ್ರಾಮದ ಕೆರೆಗಳು, ಬಾವಿಗಳು ಒಣಗುತ್ತಿರುವುದರಿಂದ ನೀರಿನ ಲಭ್ಯತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರ ಪರಿಣಾಮವಾಗಿ ಗ್ರಾಮಸ್ಥರು ದೂರದ ಪ್ರದೇಶಗಳಿಂದ ನೀರು ತರಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ವಿಶೇಷವಾಗಿ ಜಾನುವಾರಗಳಿಗೆ ನೀರಿನ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ ಎಂದರು.
ವಾಸ್ತವ ಪರಿಸ್ಥಿತಿಯನ್ನು ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆಗಳಿಗೆ ತಕ್ಷಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಹಾಗೂ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಜೊತೆಗೆ,ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮಗಳಿಗೆ ಶೀಘ್ರದಲ್ಲೇ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಮಿತಿ ರಚಿಸಿ ವಾರಕ್ಕೊಮ್ಮೆ ಸಭೆ ನಡೆಸಿ:ಮತಕ್ಷೇತ್ರದ ಯಾವುದೇ ಗ್ರಾಮದಲ್ಲೂ ಜನ,ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಕಾಣಬಾರದು ಆ ನಿಟ್ಟಿನಲ್ಲಿ ಆಯಾ ತಾಲೂಕುಗಳ ತಹಸೀಲ್ದಾರ,ಇಓ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ವ್ಯಾಪ್ತಿ ಪ್ರದೇಶದಲ್ಲಿನ ನೀರಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಎಲ್ಲಾ ವರ್ಗದ ಜನರನ್ನು ಒಳಗೊಂಡ ಸಮಿತಿ ರಚಿಸಬೇಕು. ಶಾಸಕ ಜಿ ಎಸ್ ಪಾಟೀಲ್ ಅವರು ತಹಶಿಲ್ದಾರಿಗೆ ಸಲಹೆ ನೀಡಿದ ಅವರು, ಸಮಸ್ಯೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ನಿಯಮಿತವಾಗಿ ಪರಿಶೀಲನೆ ಮತ್ತು ಚರ್ಚೆ ಅಗತ್ಯವಿದೆ ಎಂದು ಸೂಚಿಸಿದರು.
ವಾರಕ್ಕೊಮ್ಮೆ ಸಭೆ ನಡೆಸಿ ನೀರಿನ ಲಭ್ಯತೆ, ಸರಬರಾಜು ಹಾಗೂ ಎದುರಾಗುತ್ತಿರುವ ಅಡಚಣೆಗಳ ಕುರಿತು ಚರ್ಚಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಮಿತಿಯಲ್ಲಿ ಗ್ರಾಮಸ್ಥರು, ರೈತರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.ಇದಲ್ಲದೆ, ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಒದಗಿಸುವುದರ ಜೊತೆಗೆ, ಶಾಶ್ವತ ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.ಗ್ರಾಮಸ್ಥರು ಈ ಕ್ರಮವನ್ನು ಸ್ವಾಗತಿಸಿ, ಸಮಸ್ಯೆಗೆ ಶೀಘ್ರ ಪರಿಹಾರ ದೊರಕುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ರೋಣ,ಗದಗ,ಮುಂಡರಗಿ,ಗಜೇಂದ್ರಗಡ ತಾಲೂಕಾ ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕಾಧಿಕಾರಿಗಳು, ಗ್ರಾಪಂ ಅಭಿವೃದ್ದಿ ಅಧಿಕಾರಿಗಳು, ಟಾಸ್ಕ ಪೋರ್ಸ ಸಮೀತಿ ಸದಸ್ಯರು,ಮುಖಂಡರು,ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು
