ತರುಣ್ ವೈ.ತಳವಾರ, ರೋಣ
ಸಮಾಜದ ಕಣ್ಣಲ್ಲಿ ಅವರೆಲ್ಲೋ ಒಂದು ಕಡೆ ಕೇವಲ ಚಪ್ಪಾಳೆ ತಟ್ಟುವ ಕೈಗಳಾಗಿ, ಭಿಕ್ಷೆ ಬೇಡುವ ಮುಖಗಳಾಗಿ ಅಥವಾ ಕೇವಲ ಅಣಕದ ವಸ್ತುವಾಗಿ ಕಾಣ ಸಿಗುತ್ತಾರೆ. ಆದರೆ ಅದೇ ಸಮಾಜದ ಕ್ರೂರಾತಿಕ್ರೂರ ದೃಷ್ಟಿಕೋನವನ್ನು ಮೆಟ್ಟಿ ನಿಂತು, “ನಾವು ಯಾರ ಮುಂದೆಯೂ ಕೈಯೊಡ್ಡುವುದಿಲ್ಲ, ಕಷ್ಟಪಟ್ಟು ಬೆವರು ಸುರಿಸಿ ಮಣ್ಣನ್ನೇ ನಂಬಿ ಬದುಕುತ್ತೇವೆ” ಎಂದು ಎದೆಯುಬ್ಬಿಸಿ ನಿಂತಿದ್ದಾರೆ ರಮೇಶ ಕಂಬಳಿ

ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲಾ; ನೂರಾರು ಅವಮಾನ, ಕಣ್ಣೀರು ಮತ್ತು ಹಸಿವಿನ ನಡುವೆಯೂ ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವದ ಬದುಕು ಕಟ್ಟಿಕೊಂಡ ರೋಣ ತಾಲೂಕಿನ ಸವಡಿ ಗ್ರಾಮದ 42 ವರ್ಷದ ತೃತೀಯ ಲಿಂಗಿ ರಮೇಶ ವಿರುಪಾಕ್ಷಪ್ಪ ಕಂಬಳಿ ಅವರ ಮನ ಕುಲುಕುವ ಯಶೋಗಾಥೆ.
ಅವಮಾನದ ಸುಳಿಯಲ್ಲಿ ನೊಂದ ಜೀವಕ್ಕೆ ತಾಯಿಯೇ ದೇವರೆನಿಸಿದಳು
ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಹುಟ್ಟಿದ ರಮೇಶ ಸುಮಾರು 20 ವರ್ಷಗಳ ಹಿಂದೆ, ತನ್ನ ದೇಹ ಹಾಗೂ ಮನಸ್ಸಿನಲ್ಲಿ ಆಗುತ್ತಿದ್ದ ತಳಮಳ ಬದಲಾವಣೆಗಳನ್ನು ಕಂಡಾಗ ಜಗತ್ತೇ ಶೂನ್ಯವೆನಿಸಿತ್ತು. ತಾನು ತೃತೀಯ ಲಿಂಗಿ ಎಂದು ಸಮಾಜಕ್ಕೆ ಗೊತ್ತಾದಾಗ ಎದುರಿಸಬೇಕಾಗಿ ಬಂದ ಚುಚ್ಚು ಮಾತುಗಳು, ಹೀಯಾಳಿಸುವ ನೋಟಗಳು ಒಂದೆರಡಲ್ಲಾ. ಹೆತ್ತ ತಂದೆಯೂ ಕಣ್ಣು ಮುಚ್ಚಿದಾಗ ಇಡೀ ಕುಟುಂಬ ಅನಾಥವಾಯಿತು. ಆದರೆ, ಇಂತಹ ಕಠಿಣ ಪರಿಸ್ಥಿತಿಯಲ್ಲೂ ಮಗುವನ್ನು ಕೈಬಿಡದ ವೃದ್ಧ ತಾಯಿ, ಆ ಜೀವಕ್ಕೆ ಆಸರೆಯಾಗಿ ನಿಂತಳು.

ತಾಯಿಯ ಹೊಟ್ಟೆ ತುಂಬಿಸಲು ಮತ್ತು ತಾನು ಯಾರಿಗೂ ಹೊರೆಯಾಗಬಾರದು ಎಂದು ನಿರ್ಧರಿಸಿದ ರಮೇಶ ಕಂಬಳಿ ಆರಂಭದಲ್ಲಿ ಆರಿಸಿಕೊಂಡಿದ್ದು ಕಡು ಕಷ್ಟದ ಕುರಿ ಕಾಯುವ ಕೆಲಸ. ಬಿಸಿಲು, ಮಳೆ, ಗಾಳಿ ಎನ್ನದೆ ಹಗಲಿಡಿ ಕಾಡು-ಮೇಡು ಅಲೆಯುತ್ತಾ ಸಿಗುವ ಅಲ್ಪಸ್ವಲ್ಪ ಆದಾಯದಲ್ಲಿ ತಾಯಿಯನ್ನು ಸಲಹುತ್ತಿದ್ದರು. ಆದರೆ ಆ ಬದುಕಿನಲ್ಲಿ ಭದ್ರತೆ ಇರಲಿಲ್ಲಾ.
ಬದುಕಿಗೆ ದಾರಿ ದೀಪವಾದ ‘ನರೇಗಾ’: 5 ವರ್ಷಗಳ ಹಕ್ಕಿನ ಹೋರಾಟ
ಕುರಿ ಕಾಯುತ್ತಾ ಸಾಗುತ್ತಿದ್ದ ರಮೇಶನ ಬದುಕಿನಲ್ಲಿ ಹೊಸ ಭರವಸೆಯ ಬೆಳಕು ಮೂಡಿಸಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಕಳೆದ 5 ವರ್ಷಗಳ ಹಿಂದೆ ಮೊದಲ ಬಾರಿಗೆ ನರೇಗಾ ಅಡಿಯಲ್ಲಿ ಮಣ್ಣು ಅಗೆಯಲು ಗುದ್ದಲಿ ಹಿಡಿದಾಗ, ಅದು ಕೇವಲ ಒಂದು ಕೆಲಸವಾಗಿರಲಿಲ್ಲಾ ಬದಲಿಗೆ ಅದು ಅವರ ಸ್ವಾಭಿಮಾನದ ಸಂಕೇತವಾಗಿತ್ತು.

ಜಾಬ್ ಕಾರ್ಡ್ ಸಂಖ್ಯೆ KN-14-004-027-002/1562 ಹೊಂದಿರುವ ರಮೇಶ, ಇಂದು ಗ್ರಾಮದ ಯುವಕರಿಗೆ ಮಾದರಿಯಾಗಿ ಕೆಲಸ ಮಾಡುತ್ತಾರೆ. ಕೆರೆ ಹೂಳೆತ್ತುವುದು, ಬದು ನಿರ್ಮಾಣ ಮುಂತಾದ ಕಠಿಣ ಶ್ರಮದ ಕೆಲಸಗಳನ್ನು ಹಸನ್ಮುಖಿಯಾಗಿ ಮಾಡುತ್ತಾ ಸರಕಾರದ ಯೋಜನೆಯನ್ನು ತನ್ನ ಬದುಕಿನ ಆಧಾರವನ್ನಾಗಿ ಮಾಡಿಕೊಂಡಿದ್ದಾರೆ.
ಸರ್ಕಾರದ ಸಹಾಯ ಹಸ್ತದ ಅವಶ್ಯಕತೆ
ಕಳೆದ 5 ವರ್ಷಗಳಿಂದ ನರೇಗಾ ಸಾಮಾನ್ಯ ಕಾಮಗಾರಿಗಳಲ್ಲಿ ದುಡಿಯುತ್ತಿರುವ ರಮೇಶ ಅವರ ಬದುಕಿಗೆ ಈಗ ಸರ್ಕಾರದ ಸಹಾಯ ಹಸ್ತದ ಅವಶ್ಯಕತೆ ಇದೆ, ಸದ್ಯ ಸಿಗುತ್ತಿರುವ ‘ಮೈತ್ರಿ’ ಯೋಜನೆಯ ಮಾಸಾಶನ ವೃದ್ಧ ತಾಯಿಯ ಔಷಧಿ ವೆಚ್ಚಕ್ಕೆ ನೆರವಾಗುತ್ತಿದೆಯಾದರೂ, ಇವರ ಸ್ವಂತ ಕಾಲಿನ ನಿಲ್ಲುವಲ್ಲಿ ಸರ್ಕಾರದಿಂದ ಸಹಾಯ ಹಸ್ತವನ್ನು ರಮೇಶ್ ಬಯಸುತ್ತಾರೆ. ಜೊತೆಗೆ ಸರ್ಕಾರದಿಂದ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ವಿಶೇಷ ಸೌಲಭ್ಯ ದೊರೆತರೆ ಅವರ ಕುಟುಂಬಕ್ಕೆ ಒಳಿತಾಗುತ್ತದೆ. ಈ ಮೂಲಕ ಇವರ ಕುಟುಂಬ ಆರ್ಥಿಕವಾಗಿ ಮತ್ತಷ್ಟು ಸಬಲರಾಗಲು ಸರ್ಕಾರ ಸಹಾಯ ಹಸ್ತ ಚಾಚಬೇಕಿದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.
ಗ್ರಾಮಸ್ಥರ ಪ್ರೀತಿ:
ತಾರತಮ್ಯದ ಬೇಲಿ ಮುರಿದ ಊರು ರಮೇಶನ ಕಥೆಯಲ್ಲಿ ಅತ್ಯಂತ ಹೃದಯಸ್ಪರ್ಶಿ ಮತ್ತು ಹೆಮ್ಮೆಯ ವಿಷಯವೆಂದರೆ ಸವಡಿ ಗ್ರಾಮಸ್ಥರ ನಡೆ. ಇಂದಿಗೂ ನಗರ ಪ್ರದೇಶಗಳಲ್ಲೇ ತೃತೀಯ ಲಿಂಗಿಗಳನ್ನು ದೂರ ಇಡುವ ಕಾಲದಲ್ಲಿ, ಈ ಹಳ್ಳಿಯ ಜನ ರಮೇಶನನ್ನು “ಸರಿಸಮಾನವಾಗಿ” ನಡೆಸಿಕೊಳ್ಳುತ್ತಾರೆ. “ಅವನು ನಮ್ಮ ಊರಿನ ಮಗು, ನಮ್ಮಂತೆಯೇ ದುಡಿದು ಬದುಕುತ್ತಿದ್ದಾನೆ” ಎಂಬ ಗ್ರಾಮಸ್ಥರ ಪ್ರೀತಿಯೇ ರಮೇಶನಿಗೆ ಜಗತ್ತನ್ನು ಗೆಲ್ಲುವ ಶಕ್ತಿ ನೀಡಿದೆ.

ರಮೇಶನಿಗೆ ಇರೋ ಒಂದು ಎಕರೆ ಸಣ್ಣ ಒಣ ಬೇಸಾಯದ ಜಮೀನು ಮತ್ತು ಒಂದು ಪುಟ್ಟ ಮನೆಯಲ್ಲಿ ತಾಯಿಯ ಜೊತೆ ವಾಸವಿರುವ ರಮೇಶ, ನರೇಗಾ ಕೆಲಸವಿಲ್ಲದ ದಿನಗಳಲ್ಲಿ ಖಾಲಿ ಕೂರದೆ ಬೇರೆ ರೈತರ ಹೊಲಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಕಾಯಕವೇ ಕೈಲಾಸ ಎಂಬಂತೆ ದುಡಿಯುವುದೊಂದೇ ಇವರ ಕಣ್ಣ ಮುಂದಿರುವ ಗುರಿ.
ನನಗೆ ಭಿಕ್ಷೆ ಬೇಡಲು ಇಷ್ಟವಿಲ್ಲ,ಬೆವರು ಸುರಿಸಿ ಅಮ್ಮನನ್ನು ಸಾಕುತ್ತೇನೆ
ತಮ್ಮ ಕಣ್ಣಾಲಿಗಳನ್ನು ಒರೆಸಿಕೊಳ್ಳುತ್ತಾ ರಮೇಶ ಆಡುವ ಮಾತುಗಳು ಯಾರ ಹೃದಯವನ್ನು ದರೂ ಕರಗಿಸುವಂತಿದೆ
“ನನ್ನಂತವರಿಗೆ ಸಮಾಜದಲ್ಲಿ ಬದುಕುವುದು ಎಷ್ಟು ಕಷ್ಟ ಅಂತ ನನಗೆ ಗೊತ್ತು. ನನಗೂ ಸಿಟಿಗೆ ಹೋಗಿ ಭಿಕ್ಷೆ ಬೇಡಿ ಸುಲಭವಾಗಿ ದುಡ್ಡು ಮಾಡಬಹುದಿತ್ತು. ಆದರೆ ನನಗೆ ನನ್ನ ತಾಯಿಯ ಸಂಸ್ಕಾರ ಮುಖ್ಯವಾಗಿತ್ತು. ಹಳ್ಳಿಯ ಮಣ್ಣಿನಲ್ಲಿ ಕಷ್ಟಪಟ್ಟು, ಬೆವರು ಸುರಿಸಿ ಬರುವ ನೂರು ರೂಪಾಯಿ ಸಾಕು ನನಗೆ. ಈ ನರೇಗಾ ಯೋಜನೆ ನನಗೆ ಕೆಲಸ ಕೊಟ್ಟಿದ್ದಲ್ಲದೇ ಸಮಾಜದಲ್ಲಿ ಎಲ್ಲರಂತೆ ತಲೆಯೆತ್ತಿ ಬಾಳುವ ಗೌರವ ಕೊಟ್ಟಿದೆ…” ಎಂದು ಕೈ ಮುಗಿಯುತ್ತಾರೆ.
ನರೇಗಾ ಯೋಜನೆ ಕೇವಲ ಗ್ರಾಮೀಣ ಭಾಗದ ಆಸ್ತಿಗಳನ್ನು ಸೃಜಿಸುತ್ತಿಲ್ಲಾ, ಬದಲಿಗೆ ರಮೇಶ ನಂತಹ ಅದೆಷ್ಟೋ ಶೋಷಿತ ಜೀವಗಳ ಬದುಕಿಗೆ ಘನತೆ ಮತ್ತು ಆತ್ಮವಿಶ್ವಾಸದ ಹೊಸ ಆಸ್ತಿಯನ್ನು ಕರುಣಿಸುತ್ತಿದೆ. ತಾರತಮ್ಯ ಇಲ್ಲದ ಸಮಾಜ ಮತ್ತು ಶ್ರಮಜೀವಿಯೊಬ್ಬರ ಈ ಸ್ವಾಭಿಮಾನದ ಪಯಣ ಸವಡಿ ಗ್ರಾಮಕ್ಕೆ, ರೋಣ ತಾಲೂಕಿಗೆ, ಗದಗ ಜಿಲ್ಲೆಗೆ ಮಾತ್ರವಲ್ಲದೇ ಕರ್ನಾಟಕ ರಾಜ್ಯಕ್ಕೆ ಪ್ರೇರಣೆಯಾಗಿದೆ.
“ನರೇಗಾ ಯೋಜನೆ ಸಮಾಜದಲ್ಲಿ ಸಮಾನತೆ ತರುವ ಕ್ರಾಂತಿ. ತೃತೀಯ ಲಿಂಗಿ ರಮೇಶ ಅವರು 5 ವರ್ಷಗಳಿಂದ ಸತತವಾಗಿ ನರೇಗಾ ಕೆಲಸ ಮಾಡುತ್ತಿರುವುದು ಇಡೀ ತಾಲೂಕಿಗೆ ಹೆಮ್ಮೆ. ಭಿಕ್ಷಾಟನೆ ಮೆಟ್ಟಿ ನಿಂತು ಸ್ವಾವಲಂಬಿಯಾದ ಇವರಿಗೆ ಇಲಾಖೆಯಿಂದ ಸಿಗಬೇಕಾದ ವೈಯಕ್ತಿಕ ಜಮೀನಿನ ಕಾಮಗಾರಿಗಳು ಸೇರಿದಂತೆ ಎಲ್ಲಾ ವೈಯಕ್ತಿಕ ಸೌಲಭ್ಯಗಳನ್ನು ಆದ್ಯತೆಯ ಮೇಲೆ ನೀಡಲು ನಾವು ಬದ್ಧರಾಗಿದ್ದೇವೆ.”- ಚಂದ್ರಶೇಖರ ಬಿ. ಕಂದಕೂರ, ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತ ರೋಣ.
”ಕೊನೆಯ ಸ್ತರದ ವ್ಯಕ್ತಿಗೂ ಆರ್ಥಿಕ ಭದ್ರತೆ ನೀಡುವುದೇ ನರೇಗಾದ ಮುಖ್ಯ ಉದ್ದೇಶ. ಯಾರ ಮುಂದೆಯೂ ಕೈಯೊಡ್ಡದೆ ಶ್ರಮದಾನ ಮಾಡುತ್ತಿರುವ ರಮೇಶ ಕಂಬಳಿ ಅವರ ಬದುಕು ಜಿಲ್ಲೆಗೆ ಮಾದರಿ. ಇಂತಹ ಕಾಯಕ ಯೋಗಿಗಳಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಅಗತ್ಯವಿರುವ ವೈಯಕ್ತಿಕ ಆಸ್ತಿ ಸೃಜನೆ ಮತ್ತು ಆರ್ಥಿಕ ನೆರವಿನ ಸೌಲಭ್ಯಗಳನ್ನು ಒದಗಿಸಲು ಸಂಪೂರ್ಣ ಪ್ರೋತ್ಸಾಹ ನೀಡಲಾಗುವುದು.”
ಸಿ. ಆರ್. ಮುಂಡರಗಿ, ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ ಗದಗ.
