ವಿಜಯ ಸಿಂಧೂರ ತಾಳಿಕೋಟೆ
ತಾಳಿಕೋಟೆ ಪಟ್ಟಣದಲ್ಲಿ ಪ್ರಜಾ ಸೌಧ ನಿರ್ಮಾಣ ಮಾಡಬೇಕು ಎನ್ನುವುದು ಜನತೆಯ ಕೂಗು, ಪಟ್ಟದಿಂದ ಸುಮಾರು 4 ಕಿ. ಮೀ ದೂರದಲ್ಲಿ ಗುರುತಿಸಿರುವ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ಮಾಡಿರುವ ಕ್ಷೇತ್ರದ ಜನಪ್ರತಿನಿಧಿಗಳ ಪಟ್ಟು, ಕಳೇದ 53 ದಿನಗಳಿಂದ ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಮಧ್ಯ ನಡೆಯುತ್ತಿರುವ ಮುಸುಕಿನ ಗುದ್ದಾಟ, ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತಿದ್ದು ಆ ನಿಟ್ಟಿನಲ್ಲಿ ಸೋಮವಾರ ವಿವಿಧ ಸಂಘಟನೆಗಳ ಮುಖಂಡರು, ಹೋರಾಟ ಸಮಿತಿ ಸದಸ್ಯರು ಸಭೆ ನಡೆಸಿ ಏಪ್ರಿಲ್ 19 ರಂದು ಸರ್ವರ ಸಭೆ ನಡೆಸಿ ಜನರ ತಿರ್ಮಾನದಂತೆ ಉಗ್ರ ಹೋರಾಟ ನಡೆಸುವುದಾಗಿ ತಿರ್ಮಾನಿಸಿದ್ದಾರೆ

ತಾಲೂಕಾಡಳಿತ ಶಕ್ತಿ ಕೇಂದ್ರ ಎನಿಸಿಕೊಂಡ ಪ್ರಜಾಸೌಧ ನೂತನ ಕಟ್ಟಡ ತಾಳಿಕೋಟೆ ಪಟ್ಟಣದ ಹ್ರದಯ ಭಾಗದಲ್ಲಿ ನಿರ್ಮಾಣ ಮಾಡ ಬೇಕು ಎಂಬ ಬೇಡಿಕೆಗೆ ಸಂಬಂಧಿಸಿ ಕಳೆದ 53 ದಿನಗಳಿಂದ ಬಸವೇಶ್ವರ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಮುಂದುವರಿದಿದೆ.
ಈ ಹೋರಾಟದ ಮುಂದಿನ ಹಂತಗಳ ಕುರಿತು ಚರ್ಚಿಸಲು ತಾಳಿಕೋಟಿ ತಾಲೂಕು ಹೋರಾಟ ಸಮಿತಿಯು ಏಪ್ರಿಲ್ 19, ಭಾನುವಾರ ಸಂಜೆ 5 ಗಂಟೆಗೆ ಪಟ್ಟಣದ ವಿಠ್ಠಲ್ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದೆ.
ಸಭೆಯಲ್ಲಿ ಹೋರಾಟದ ರೂಪುರೇಷೆಗಳು, ಮುಂದಿನ ಕ್ರಮಗಳು ಮತ್ತು ಸಾರ್ವಜನಿಕರ ಭಾಗವಹಿಸುವಿಕೆ ಕುರಿತು ಸಮಗ್ರ ಚರ್ಚೆ ನಡೆಯಲಿದೆ. ತಾಳಿಕೋಟಿ ಪಟ್ಟಣದ ಸರ್ವ ಸಮಾಜದ ಹಿರಿಯರು, ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪಟ್ಟಣದ ಎಲ್ಲ ಅಸೋಷಿಯೇಷನಗಳು, ಹಾಗೂ ತಾಳಿಕೋಟಿ ತಾಲೂಕಿನ 57 ಹಳ್ಳಿಗಳ ಮುಖಂಡರುಗಳು ಹೋರಾಟಗಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಮನವಿ ಮಾಡಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
