! ವಿಜಯ ಸಿಂಧೂರ ರೋಣ
ಪೌರಾಣಿಕ ಹಿನ್ನೆಲೆ ಹೊಂದಿರುವ ಪಟ್ಟಣದ ಆರಾಧ್ಯ ದೇವರು ಶ್ರೀ ವೀರಭದ್ರೇಶ್ವರ ರಥೋತ್ಸವವು ಲಕ್ಷಾಂತರ ಭಕ್ತರ ಜಯಂಕಾರ ಹಾಗೂ ನಾಡಿನ ಪೂಜ್ಯರ ಸಾನ್ನಿಧ್ಯದಲ್ಲಿ ವೈಭವದಿಂದ ಸೋಮವಾರ ಸಂಜೆ ಜರುಗಿತು.
ಗದಗ ಜಿಲ್ಲೆ, ನೆರೆ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಿಂದ ಹರಿದು ಬಂದ ಭಕ್ತರ ಮಹಾಪೂರದ ನಡುವೆ ರಥೋತ್ಸವ ಸಡಗರ, ಶ್ರದ್ಧಾ ಮತ್ತು ಸಂಭ್ರಮದ ವಾತಾವರಣದಲ್ಲಿ ನೆರವೇರಿತು.

ಮೂರ್ತಿ ಮೆರೆವಣಿಗೆ :ಬೆಳ್ಳಿಯ ವೀರಭದ್ರೇಶ್ವರನ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಅರ್ಚಕರು ಪುರವಂತರ ವೀರಗಾಸೆಯೊಂದಿಗೆ ಪೂಜೆಯನ್ನು ಆರಂಭಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. “ಹರ ಹರ ಮಹಾದೇವ” ಘೋಷಣೆಗಳ ನಡುವೆ ಭಕ್ತರು ರಥವನ್ನು ದೇವಸ್ಥಾನದಿಂದ ಪೋತರಾಜನ ಕಟ್ಟೆ ಸಮೀಪದ ಪಾದಗಟ್ಟೆವರೆಗೆ ಕೈಬಲದಿಂದ ಎಳೆದುಕೊಂಡು ಹೋದರು.
ಸಂಜೆ ವೇಳೆಗೆ ರಥವು ಮರಳಿ ದೇವಸ್ಥಾನ ತಲುಪುವ ಸಂದರ್ಭದಲ್ಲಿ ಪಟ್ಟಣದ ಬೀದಿ ದೀಪಗಳು ರಥೋತ್ಸವದ ಸೊಬಗು ಹೆಚ್ಚಿಸಿದವು. ರಥದ ಮೇಲೆ ಉತ್ತತ್ತಿ, ಬಾಳೆಹಣ್ಣು ಹಾಗೂ ಬೆಂಡುಬೆತ್ತಾಸು,ಚುರುಮರಿ ಎರಚಿ,ರಥದ ಗಾಲಿಗೆ ತೆಂಗಿನ ಕಾಯಿ ಹಾಕಿ ಹರಕೆ ತೀರಿಸುವ ಸಂಪ್ರದಾಯ ಜೀವಂತವಾಗಿತ್ತು.ಬೆಳಿಗ್ಗೆ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.

ದೇವಸ್ಥಾನದ ಮುಂಭಾಗದಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕರಡಿ ಮಜಲು, ವೀರಗಾಸೆ ಸಮ್ಮಾಳು ವಾದನ, ಡೊಳ್ಳು, ನಂದಿಕೋಲು, ವೀರಗಾಸೆ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಕಾಲು ನಡಿಗೆಯ ಸಂಪ್ರದಾಯ :ರೋಣ ಶ್ರೀ ವೀರಭದ್ರೇಶ್ವರ ಜಾತ್ರೆಯ ಪ್ರಮುಖ ವೈಶಿಷ್ಟ್ಯವೆಂದರೆ ನೆರೆ,ಹೊರೆಯ ಗ್ರಾಮಗಳಿಗಳಿಂದ ಕಾಲುನಡಿಗೆಯಲ್ಲಿ ಆಗಮಿಸುವ ಭಕ್ತರ ಸಂಖ್ಯೆ. ಅನೇಕರು ಹರಕೆ ತೀರಿಸುವ ನಂಬಿಕೆಯೊಂದಿಗೆ ಶ್ರೀ ವೀರಭದ್ರೇಶ್ವರನ ಆರಾಧಕರು ನಡೆದೇ ಬರುವುದು ಇಲ್ಲಿ ವಿಶೇಷ. ಇವರಿಗಾಗಿ ಹಲವಾರು ಸಂಘ-ಸಂಸ್ಥೆಗಳು ಮತ್ತು ಭಕ್ತರು ದಾರಿಯುದ್ದಕ್ಕೂ ಅಲ್ಪೋಪಹಾರದ ವ್ಯವಸ್ಥೆ ಮಾಡಿದ್ದು ಮೆಚ್ಚುಗೆ ಗಳಿಸಿತು.
ವೀರಗಾಸೆ ಕುಣಿತ, ಪೂಜಾ ಕುಣಿತ, ಜಗ್ಗಲಗಿ ಮೇಳ ಮತ್ತು ಕರಡಿ ಮೇಳಗಳು ರಥೋತ್ಸವದ ರಂಗನ್ನು ಹೆಚ್ಚಿಸಿದವು,ಮಂಗಳ ವಾದ್ಯ, ನಾದಸ್ವರ ಮತ್ತು ವೀರಗಾಸೆಯ ಸಮ್ಮಾಳು ಸಂಗೀತ ಸಾಧನಗಳು ರಥೋತ್ಸವಕ್ಕೆ ಶ್ರದ್ಧಾಭಕ್ತಿಯನ್ನು ಹೆಚ್ಚಿಸಿದವು ಹಸಿರು ಸೀರೆ ಮತ್ತು ಕುಪ್ಪಸ ಧರಿಸಿದ ಮಹಿಳೆಯರು ಆರತಿ ಬೆಳಗುವುದು, ಅಲಂಕೃತ ರಥ ಮತ್ತು ದೇವರ ಮೂರ್ತಿಯ ಭವ್ಯ ಅಲಂಕಾರವು ಪ್ರಮುಖ ಆಕರ್ಷಣೆಯಾಗಿತ್ತು.ಲಕ್ಷಾಂತರ ಭಕ್ತರ ಪಾಲ್ಗೊಳ್ಳುವಿಕೆ ಮತ್ತು ಅವರ ಭಕ್ತಿಭಾವವು ರಥೋತ್ಸವಕ್ಕೆ ನಿಜವಾದ ಮೆರುಗು ತಂದಿತ್ತು.ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಅನ್ನ ಸಂತರ್ಪಣೆಗೆ ಚಾಲನೆ ನೀಡಲಾಯಿತು. ಸಂಜೆ ವರೆಗೆ ಸಾವಿರಾರು ಜನ ಪ್ರಸಾದ ಸ್ವೀಕರಿಸಿದರು.

ಈ ರಥೋತ್ಸವದಲ್ಲಿ ಶಾಸಕ ಜಿ ಎಸ್ ಪಾಟೀಲ,ಆಯ್ ಎಸ್ ಪಾಟೀಲ, ಮಿಥುನ್ ಪಾಟೀಲ್, ವೀರಣ್ಣ ಶೆಟ್ಟರ, ಚನ್ನಪ್ಪಗೌಡ, ಎಮ್ ಎ ನಿಂಗನಗೌಡ, ಸೇರಿದಂತೆ ಕಮೀಟಿಯ ಪದಾಧಿಕಾರಿಗಳು ಇದ್ದರು.
