ವಿಜಯ ಸಿಂಧೂರ ಸಿಂದಗಿ
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ ಅವರು ತಾಲೂಕಿನ ಕನ್ನೊಳ್ಳಿ ಹಾಗೂ ವಿವಿಧ ಗ್ರಾಪಂ ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮತ್ತು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಕನ್ನೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸರ್ಕಾರಿ ಹಳ್ಳದ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ನರೇಗಾ ಕಾರ್ಮಿಕರೊಂದಿಗೆ ಸಮಾಲೋಚಿಸಿದ ಅವರು, ಎಲ್ಲ ಕೂಲಿಕಾರರು ಪ್ರತಿ ದಿನ ಬೆಳಿಗ್ಗೆ ಬೇಗನೆ ಆಗಮಿಸಿ ಬೇಗ ಕೆಲಸ ಮುಗಿಸಿ ಬೇಗ ಮನೆಗೆ ತೆರಳಬಹುದು ಎಂದರು.

ಬೇಸಿಗೆಯಿರುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಎಲ್ಲರೂ ಆರೋಗ್ಯ ಕಾಳಜಿ ವಹಿಸಬೇಕು. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ನರೇಗಾ ಕೆಲಸದಲ್ಲಿ ಭಾಗವಹಿಸುವ ಮೂಲಕ ನರೇಗಾ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಗ್ರಾಮ ಮಟ್ಟದಲ್ಲಿರುವ ಎಲ್ಲ ಸಾರ್ವಜನಿಕರಿಗೆ, ಸ್ವ ಸಹಾಯ ಸಂಘಗಳ ಮಹಿಳೆಯರಿಗೆ ನರೇಗಾ ಯೋಜನೆಯ ಕುರಿತು ಜಾಗೃತಿ ಮೂಡಿಸಿ, ಕೂಲಿ ಕೆಲಸಕ್ಕೆ ಹೆಚ್ಚಿನ ಜನರು ಬರುವಂತೆ ಕ್ರಮ ಕೈಗೊಳ್ಳಬೇಕು ಎಂದ ಅವರು ತಾಲೂಕು ಐಇಸಿ ಸಂಯೋಜಕರಿಗೆ ಸೂಚಿಸಿದರು.
ಬಳಿಕ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಜಿಪಂ ಮುಖ್ಯ ಯೋಜನಾಧಿಕಾರಿಗಳು, ಗ್ರಾಪಂ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಾತಿ ಪರಿಶೀಲಿಸಿ, ಅವರ ಕಾರ್ಯವೈಖರಿಗಳ ಬಗ್ಗೆ ಪರಿಶೀಲಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳಾದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪ್ರಗತಿ, ಕೂಲಿಕಾರರ ಇಕೆವೈಸಿ, ತೆರಿಗೆ ವಸೂಲಾತಿ, ಸಕಾಲ ಅರ್ಜಿ, ಸಿಬ್ಬಂದಿ ಇ-ಹಾಜರಾತಿ ಹೀಗೆ ವಿವಿಧ ವಿಷಯಗಳ ಪ್ರಗತಿ ಕುರಿತು ಪರಿಶೀಲನೆ ನಡೆಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೆಚ್ಚಿನ ಕೂಲಿಕಾರರಿಗೆ ಉದ್ಯೋಗ ಒದಗಿಸುವುದು ಮತ್ತು ನಿಗದಿತ ಗುರಿಗೆ ತಕ್ಕಂತೆ ಮಾನವ ದಿನಗಳ ಸೃಜನೆ ಮಾಡಬೇಕು ಎಂದು ಸೂಚನೆ ನೀಡಿದರು.
ನಿಗದಿತ ಸಮಯದಲ್ಲಿ ಕೂಲಿ ಪಾವತಿ, ನರೇಗಾ ಕೂಲಿಕಾರರ ಇ-ಕೆವೈಸಿ, ಕಾಮಗಾರಿಗಳ ಮುಕ್ತಾಯ, ನರೇಗಾ ಕೂಲಿಕಾರರ ಎನ್ ಎನ್ ಎಂಎಸ್ ಫೇಸ್ ಅಥೆಂಟಿಕೇಷನ್, ಯುಕ್ತದಾರದಲ್ಲಿ ಕಾಮಗಾರಿ ಎಂಟ್ರಿ ಮಾಡುವುದು, ಕಾಮಗಾರಿ ಮುಕ್ತಾಯ ಸಾಮಾಜಿಕ ಪರಿಶೋಧನೆ, ಪ್ರಗತಿ ವರದಿ, ಅಡಹಾಕ್ ಸಭೆ, ನರೇಗಾ ಕಾಮಗಾರಿಗಳ ಮುಕ್ತಾಯ, ಪಂಚಾಯತ ರಾಜ್ ವಿಷಯಗಳಾದ ತೆರಿಗೆ ವಸೂಲಾತಿ, ಇ-ಹಾಜರಾತಿ, ಮಹಿಳಾ ಗ್ರಾಮ ಸಭೆ, ಕುಡಿಯುವ ನೀರಿನ ಸಮಸ್ಯೆ ಹೀಗೆ ವಿವಿಧ ವಿಷಯಗಳ ಕುರಿತು ಪರಿಶೀಲಿಸಿದರು
ಈ ಸಂದರ್ಭದಲ್ಲಿ ಜಿಪಂ ಸಿಇಒ ಶ್ರೀರಾಮು ಜಿ ಅಗ್ನಿ, ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಗ್ರಾಮ ಪಂಚಾಯತ್ ಕಾರ್ಯದರ್ಶಿ ಯಲ್ಲಪ್ಪ ಮೇಟಿ, ತಾಲೂಕು ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕರು ಶ್ರೀ ಭೀಮರಾಯ ಚೌಧರಿ, ತಾಂತ್ರಿಕ ಸಹಾಯಕರು ಶ್ರೀ ಮೌಲಾಲಿ ಮುಲ್ಲಾ, ಕಾಯಕ ಮಿತ್ರ ರೇಣುಕಾ ಬಾವಿಮನಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
