ವಿಜಯ ಸಿಂಧೂರ, ಗಜೇಂದ್ರಗಡ
12ನೇ ಶತಮಾನದ ವಿಶ್ವಗುರು ಬಸವಣ್ಣನವರು ಜಾತಿರಹಿತ, ಸಮಾನತೆಯ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಸಮಾಜ ಸುಧಾರಕರು. ‘ಕಾಯಕವೇ ಕೈಲಾಸ’ ಕೆಲಸವೇ ದೇವರೆಂದು ಪೂಜಿಸುವುದು ಮತ್ತು ‘ದಾಸೋಹ’ ದುಡಿದಿದ್ದರಲ್ಲಿ ಹಂಚಿ ತಿನ್ನುವುದು ತತ್ವಗಳ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ಸಾರಿದರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಅಡಿಪಾಯ ಹಾಕಿ, ಅಂತರ್ಜಾತಿ ವಿವಾಹ, ಮಹಿಳಾ ಸಬಲೀಕರಣ ಮತ್ತು ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಹೇಳಿದರು

ಅವರು ಸೋಮವಾರ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ಶ್ರೀ ಬಸವಣ್ಣನವರ ವ್ರತ್ತ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.
ಲಿಂಗ, ಜಾತಿ ಆಧಾರಿತ ತಾರತಮ್ಯವನ್ನು ವಿರೋಧಿಸಿ, ಸಮ ಸಮಾಜದ ಪರಿಕಲ್ಪನೆಯನ್ನು ಮೂಡಿಸಿದರು. ಕಾಯಕವೇ ಕೈಲಾಸ’ ಎಂಬ ಮಂತ್ರದ ಮೂಲಕ ದುಡಿಮೆಯ ಘನತೆಯನ್ನು ಎತ್ತಿಹಿಡಿದರು. ಕಾಯಕನಿಷ್ಠೆ ಧರ್ಮದ ಬುನಾದಿಯಾಗಬೇಕೆಂದು ಪ್ರತಿಪಾದಿಸಿದರು ಎಂದರು

ಅಂದಿನ ಕಾಲದಲ್ಲೇ 770 ಶರಣರು, ಮಹಿಳೆಯರು ಮತ್ತು ಕೆಳವರ್ಗದವರು ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುವ ವಿಶ್ವದ ಮೊದಲ ಸಂಸತ್ತು ‘ಅನುಭವ ಮಂಟಪ’ ಸ್ಥಾಪಿಸಿದರು. ಸಾಮಾನ್ಯ ಭಾಷೆಯಲ್ಲಿ ವಚನಗಳನ್ನು ಬರೆಯುವ ಮೂಲಕ ತತ್ವಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸಿದರು ಎಂದರು

ಅಕ್ಕಮಹಾದೇವಿ ಸೇರಿದಂತೆ ಅನೇಕ ಮಹಿಳಾ ಶರಣೆಯರಿಗೆ ಸಾಮಾಜಿಕ ಮತ್ತು ಆಧ್ಯಾತ್ಮಿಕ ಬದುಕಿನಲ್ಲಿ ಸಮಾನ ಅವಕಾಶ ಕಲ್ಪಿಸಿದರು. ಅಹಿಂಸೆಯನ್ನು ಬಲವಾಗಿ ಪ್ರತಿಪಾದಿಸಿ, ಮೌಢ್ಯತೆ ಮತ್ತು ಜಾತಿ ಪದ್ಧತಿಯನ್ನು ಖಂಡಿಸಿದರು. ಬಸವಣ್ಣನವರ ವಿಚಾರಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ ಮಾತನಾಡಿ,ವಿಶ್ವಗುರು ಬಸವಣ್ಣ ಅವರು 12ನೇ ಶತಮಾನದಲ್ಲಿಯೇ ಸಮಾನತೆಯ ಹಾಗೂ ಜಾತಿರಹಿತ ಸಮ ಸಮಾಜ ನಿರ್ಮಾಣಕ್ಕಾಗಿ ಪ್ರಯತ್ನಿಸಿದ್ದರು. ಅವರ ಅನುಭವ ಮಂಟಪ ಪರಿಕಲ್ಪನೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಗೊಂಡಿತ್ತು’ ಎಂದರು
‘ಬಸವಾದಿ ಶರಣರ ಅರಿವು, ಆಚಾರ, ಅನುಭವದಿಂದ ರಚಿತವಾದ ವಚನಗಳಲ್ಲಿ ಬಸವತತ್ವ ದರ್ಶನವಿದೆ. ಭಾರತೀಯ ದಾರ್ಶನಿಕ ಪರಂಪರೆಯ ಕೆನೆಯಾಗಿರುವ ಬಸವತತ್ವ ದರ್ಶನದಲ್ಲಿ ಗುರುತತ್ತ್ವ ಅಮೂಲ್ಯವಾಗಿದೆ’ ಎಂದು ಹೇಳಿದರು.
ಗಜೇಂದ್ರಗಡದ ವಿಜಯ ಮಹಾಂತೇಶ ಸ್ವಾಮೀಜಿ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕಾದ ಅವಶ್ಯವಿದೆ‘ ಸುಳ್ಳಿಗಿಂತ ಸತ್ಯ ಶ್ರೇಷ್ಠ, ಸತ್ಯಕ್ಕಿಂತ ಆಚರಣೆ ಶ್ರೇಷ್ಠ ಎಂಬುದನ್ನು ವಚನದಲ್ಲಿ ಒತ್ತಿ ಒತ್ತಿ ಹೇಳಿದ್ದಾರೆ. ಆಚಾರವೇ ಸ್ವರ್ಗವಾದರೇ, ಅನಾಚಾರವೇ ನರಕವಾಗಿದೆ, ನಾಲಿಗೆ ಒಳ್ಳೆಯದಾದರೇ ನಾಡಿಗೆಲ್ಲಾ ಒಳ್ಳೆಯದಾಗುತ್ತದೆ ಎಂಬ ಉದ್ದೇಶ ಹೊತ್ತು ಸಮುದಾಯದ ಪರವಾಗಿ ಜೀವಿಸಿದ್ದರು ಎಂದು ಸ್ಮರಿಸಿದರು.
ಈ ಸಮಯದಲ್ಲಿ ಬಸವ ಬಳಗದ ಸದಸ್ಯರು, ಮುಖಂಡರು,ವಿವಿಧ ಸಂಘಟನೆಗಳ ಸದಸ್ಯರು ಇದ್ದರು.
