ವಿಶ್ವಗುರು ಬಸವಣ್ಣನವರ ವಚನಗಳು ಬದುಕಿಗೆ ಮಾರ್ಗ : ಸಿ.ಸಿ.ಪಾಟೀಲ

ವಿಜಯ ಸಿಂಧೂರ, ನರಗುಂದ

ವಿಶ್ವ ಗುರು ಬಸವಣ್ಣನವರ ವಚನಗಳು ಮಕ್ಕಳಿಗೆ ಸತ್ಯ, ಕಾಯಕ, ಸಮಾನತೆ ಮತ್ತು ಪ್ರೀತಿಯನ್ನು ಕಲಿಸುವ ಅತ್ಯುತ್ತಮ ಮಾರ್ಗ. ವಚನಗಳು ಸರಳ ಭಾಷೆಯಲ್ಲಿ, ಬದುಕಿನ ಮೌಲ್ಯಗಳನ್ನು ತಿಳಿಸುತ್ತವೆ. ಎಲ್ಲರನ್ನೂ ಪ್ರೀತಿಸುವುದನ್ನು ಬೋಧಿಸುತ್ತವೆ. “ಕಳಬೇಡ, ಕೊಲಬೇಡ” ಮತ್ತು “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂಬ ವಚನಗಳು ಮಕ್ಕಳಿಗೆ ತುಂಬಾ ಪ್ರಸಿದ್ಧ ಎಂದು ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ ಹೇಳಿದರು

ಅವರು ಸೋಮವಾರ ನರಗುಂದ ಪಟ್ಟಣದಲ್ಲಿ ಬಸವ ಜಯಂತಿ ಪ್ರಯುಕ್ತ ರಾಷ್ಟೀಯ ಬಸವ ಜಯಂತಿ ಸೇವಾ ಸಂಘ ನರಗುಂದ, ಬಸವ ಕೇಂದ್ರ ನರಗುಂದ, ಬಸವ ಬಳಗ ಶರಣ ಸಾಹಿತ್ಯ ಪರಿಷತ್ ನರಗುಂದ, ಕದಳಿ ಮಹಿಳಾ ವೇದಿಕೆ ನರಗುಂದ ಮತ್ತು ತಾಲೂಕಾ ಆಡಳಿತದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. ಕಳ್ಳತನ ಮಾಡಬೇಡ, ಕೊಲೆ ಮಾಡಬೇಡ, ಸುಳ್ಳು ಹೇಳಬೇಡ, ಕೋಪ ಮಾಡಬೇಡ, ಬೇರೆಯವರನ್ನು ನಿಂದಿಸಬೇಡ, ತನ್ನ ಹೊಗಳಿಕೆ ಬೇಡ, ಬೇರೆಯವರನ್ನು ಹೀಯಾಳಿಸಬೇಡ. ಇದೇ ನಿಜವಾದ ಶುದ್ಧತೆ ಎಂದರು

“ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು,
ನುಡಿದರೆ ಲಿಂಗಮೆಚ್ಚಿ ಅಹುದಹುದೆನ್ನಬೇಕು,
ಕೂಡಲಸಂಗಮದೇವನೊಲಿದು ಒಲ್ಲೆನೆನ್ನಬೇಕು. ನಾವು ಮಾತನಾಡುವ ಮಾತು ಮುತ್ತು, ಮಾಣಿಕ್ಯದಂತೆ ಬೆಲೆಬಾಳುವ ಮತ್ತು ಶುದ್ಧವಾಗಿರಬೇಕು. ನಮ್ಮ ಮಾತು ಕೇಳಿ ದೇವರು ಕೂಡ ಸಂತೋಷಪಡಬೇಕು ಎಂದರು

ಕಾಯಕವೇ ಕೈಲಾಸ
“ತನ್ನ ಕಾಯಕದಲಿ ತಾನು ನಿರತನಾದಡೆ
ಗುರುದರ್ಶನವಾದರೂ ಮರೆಯಬಹುದು.
ಲಿಂಗಪೂಜೆಯಾದರೂ ಮರೆಯಬಹುದು.
ಜಂಗಮದ ದರ್ಶನವಾದರೂ ಮರೆಯಬಹುದು.
ತನ್ನ ಕಾಯಕದಲಿ ತಾನು ನಿರತನಾದಡೆ
ಕೂಡಲಸಂಗಮದೇವಾ.”
ನಾವು ಮಾಡುವ ಕೆಲಸವೇ ದೇವರು. ಪ್ರಾಮಾಣಿಕವಾಗಿ ಕಾಯಕ ಕೆಲಸ, ಓದು ಮಾಡುವುದು ಪೂಜೆಗಿಂತ ಮಿಗಿಲಾದದ್ದು ಎಂದರು

“ಇವನಾರವ, ಇವನಾರವ, ಇವನಾರವನೆನ್ನದಿರಯ್ಯ.
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆನ್ನಯ್ಯ.
ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆನ್ನಯ್ಯ. ಜಾತಿ-ಭೇದ ಮಾಡದೆ ಎಲ್ಲರೂ ನಮ್ಮವರು ಎಂದು ಪ್ರೀತಿಸಬೇಕು ಎಂದರು

ವಿಶ್ವ ಗುರು ಬಸವಣ್ಣನವರ ವಚನಗಳು ಮಕ್ಕಳಲ್ಲಿ ಸಂಸ್ಕಾರಯುತ ಶಿಕ್ಷಣ ಮತ್ತು ಒಳ್ಳೆಯ ವ್ಯಕ್ತಿತ್ವ ರೂಪಿಸಲು ಸಹಾಯ ಮಾಡುತ್ತವೆ ಎಂದು ಹೇಳಿದರು

ನಂತರ ಪಟ್ಟಣದ ಬಸವೇಶ್ವರ ಸರ್ಕಲ್ ದಿಂದ ಗಾಂಧಿ ಚೌಕ್ ಮೂಲಕ ಬಸವೇಶ್ವರ ಸಮುದಾಯ ಭವನದವರೆಗೆ ಬಸವೇಶ್ವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು ನಂತರ ಬಸವೇಶ್ವರ ಸಮುದಾಯ ಭವನದಲ್ಲಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಪ್ರಾರಂಭ ಮಾಡಲಾಯಿತು

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪ್ರಭಾಕರ್ ಉಳ್ಳಾಗಡ್ಡಿ, ತಾಲೂಕಾ ಆಡಳಿತದಿಂದ ತಹಸೀಲ್ದಾರ್ ಶ್ರೀಶೈಲ ತಳವಾರ, ಎಸ್ ಆರ್ ಪಾಟೀಲ ಸಂತೋಷ ಲೂತಿಮಠ, ಅಪ್ಪಣ್ಣ ನಾಯಕರ, ಎಸ್ ಜಿ ಮಣ್ಣೂರಮಠ, ಚನ್ನಬಸಪ್ಪ ಕಂಠಿ, ಶಿಡ್ಡಪ್ಪ ಯಾಲಿಗಾರ, ಎಸ್ ವಿ ಹೆಗಡಾಳ, ಕೆ ಎನ್ ಹದಗಲ್ಲ, ವಿದ್ಯಾ ಸುಳ್ಳದ, ರತ್ನಾ ಉಪವಾಸಿ, ದೀಪಾ ಲೂತಿಮಠ, ಮಂಗಳಾ ಪಾಟೀಲ, ರಾಷ್ಟೀಯ ಬಸವ ಜಯಂತಿ ಸೇವಾ ಸಂಘ ನರಗುಂದ, ನರಗುಂದ ತಾಲೂಕ ಬಸವ ಬಳಗ ಶರಣ ಸಾಹಿತ್ಯ ಪರಿಷತ್, ಬಸವ ಕೇಂದ್ರ ನರಗುಂದ ಬಳಗ, ಕದಳಿ ಮಹಿಳಾ ವೇದಿಕೆ, ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!