ವಿಜಯ ಸಿಂಧೂರ, ಗಜೇಂದ್ರಗಡ
ಜಗಜ್ಯೋತಿ ಬಸವಣ್ಣನವರು ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಬಯಸಿದ, ಜನರಲ್ಲಿ ಜ್ಞಾನದ ದೀವಿಗೆ ಹಚ್ಚಿದ ಮಹಾನ್ ಮಾನವತಾವಾದಿ ಎಂದು ಮೈಸೂರ ಮಠದ ಶ್ರೀ ವಿಜಯಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ವೀರಶೈವ ಲಿಂಗಾಯತ ಸಮಾಜ ಗಜೇಂದ್ರಗಡ -ಉಣಚಗೇರಿ ವತಿಯಿಂದ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹನ್ನೆರಡನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕರು ಬಸವಣ್ಣನವರು. ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಇವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತ. ಇದು ಜೀವನ ಪಾಠವೂ ಹೌದು. ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಜೀವನ ಸುಖಮಯ, ಸಮಾಜವೂ ಸುಂದರ. `ಕಾಯಕವೇ ಕೈಲಾಸ’ ಎಂದು ಕಲಿಸಿಕೊಟ್ಟವರು ಬಸವಣ್ಣನವರು ಎಂದರು.
ವೀರಶೈವ ಲಿಂಗಾಯತ ಸಮಾಜ ಗಜೇಂದ್ರಗಡ -ಉಣಚಗೇರಿ ಅಧ್ಯಕ್ಷ ಸಿದ್ದಣ್ಣ ಬಂಡಿ ಮಾತನಾಡಿ, ಬಸವಣ್ಣನವರು ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಶರಣರಲ್ಲಿ ಅಗ್ರಗಣ್ಯರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಅರಿವಿನ ಕಿರಣ ಬೀರಿದವರು. ವಿಶ್ವಗುರುವಿನ ಒಂದೊಂದು ವಚನವೂ ಎಲ್ಲರ ಬದುಕಿಗೂ ಆದರ್ಶ, ಸ್ಫೂರ್ತಿ ಎಂದರು.

ಭಾವಚಿತ್ರ ಮೆರವಣಿಗೆಯೂ ಮೈಸೂರು ಮಠದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಮೈಸೂರು ಮಠಕ್ಕೆ ತಲುಪಿತು. ಮೆರವಣಿಗೆಯಲ್ಲಿ 50 ಕ್ಕೂ ಹೆಚ್ಚು ಜೋಡೆತ್ತುಗಳು ಮೆರವಣಿಗೆಗೆ ಮೆರಗು ತಂದವು.
ಮೆರವಣಿಗೆಯಲ್ಲಿ ಡಾ. ಬಿ.ವಿ. ಕಂಬಳ್ಯಾಳ, ಪ್ರಭು ಚವಡಿ, ಶಿವು ಕೊರಧಾನ್ಯಮಠ, ಅಮರೇಶ ಗಾಣಿಗೇರ, ಸಂಗಪ್ಪ ಕುಂಬಾರ, ಮುತ್ತಣ್ಣ ಮೆಣಸಿನಕಾಯಿ, ಸುಭಾಸ್ ಮ್ಯಾಗೇರಿ, ಬಸವರಾಜ ವಾಲಿ, ಅಮರಯ್ಯ ಗೌರಿಮಠ, ಪ್ರಭು ಹಿರೇಮಠ, ಬಸವರಾಜ ಶೀಲವಂತರ, ಬಸವರಾಜ ಚನ್ನಿ, ಅವಿನಾಶ ಮತ್ತಿಕಟ್ಟಿ, ವಿಶ್ವನಾಥ ಕುಷ್ಟಗಿ, ಗುರುಲಿಂಗಯ್ಯ ಹಿರೇಮಠ,ಸಿದ್ದು ಗೊಂಗಡಶೆಟ್ಟಿಮಠ, ಆನಂದ ಅಂಗಡಿ ಸೇರಿದಂತೆ ಇತರರು ಇದ್ದರು.
