ವಿಜಯ ಸಿಂಧೂರ, ರೋಣ
ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಮಾಡುತ್ತಿದೆ. ಸದ್ಯ ಯುವ ಜನಾಂಗ ಕೃಷಿಯಲ್ಲಿ ಅಪಾರ ಸಾಧನೆ ಮಾಡಿದೆ. ಅದಕ್ಕೆ ತಕ್ಕಂತೆ ಅವರಿಗೆ ಲಾಭ ದೊರಕುತ್ತಿಲ್ಲ ಎಂದು ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿ ಲಾಭದಾಯಕವಾಗಿಲ್ಲ. ಎಂಎಸ್‌ಪಿ ದರ ನಿಗದಿಪಡಿಸುವಾಗ ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಆಲೋಚಿಸಬೇಕು. ವರ್ಷ ಕಳೆದಂತೆ ಉತ್ಪಾದನೆ ಖರ್ಚು ಹೆಚ್ಚಳವಾಗುತ್ತಿದೆ. ಆದರೆ, ರೈತರ ಬದುಕು ಸದೃಢವಾಗುತ್ತಿಲ್ಲ. ರಸಗೊಬ್ಬರದ ಮೇಲೆ ಕೇಂದ್ರ ಸರ್ಕಾರ ಹಿಡಿತ ಕಳೆದುಕೊಂಡಿದೆ. ಉತ್ಪಾದನೆ ಖರ್ಚಿನ ಮೇಲೆ ಬೆಳೆಗೆ ದರ ನಿಗದಿಯಾಗಬೇಕು. ರೈತ ಉತ್ಪಾದನೆ ಮಾಡಿದ ಫಸಲಿಗೆ ತಾನೇ ದರ ನಿಗದಿ ಮಾಡಿದರೆ ಮಾತ್ರ ರೈತ ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದು ಹೇಳಿದರು.
ಕೃಷಿಕ ಸಮಾಜದ ರೋಣ ತಾಲೂಕು ಅಧ್ಯಕ್ಷ ಶಿವಪ್ಪ ಅರಹುಣಸಿ ಮಾತನಾಡಿ, ಕೃಷಿ ಬಗ್ಗೆ ಆಸಕ್ತಿ ಇದ್ದರೆ ಕೃಷಿ ಮಾಡಬೇಕು. ರೈತರು ಸಾವಯವ, ಸಿರಿಧಾನ್ಯ ಬೆಳೆಯಬೇಕು. ಇದರಿಂದ ಭೂಮಿ ಕಾಪಾಡಿಕೊಳ್ಳುವ ಜತೆಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಕೃಷಿ ಉಪನಿರ್ದೇಶಕ ಬಿ.ಆರ್. ಪಾಲಾಕ್ಷಗೌಡ ಮಾತನಾಡಿ, ಪೂರ್ವ ಮುಂಗಾರು ವಾಡಿಕೆ ಮಳೆ ೮೫ ಮಿ.ಮೀ. ಇದ್ದು, ಈವರೆಗೆ ೮೨.೫ ಮಿ.ಮೀ. ಮಳೆ ಸುರಿದಿದೆ. ಇದು ಬೀಜ ವಿತರಣೆಗೆ ಸಕಾಲವಾಗಿದೆ. ಹೆಸರು ಹಾಗೂ ತೊಗರಿ ಬೀಜ ಲಭ್ಯವಿದೆ. ಬಿತ್ತನೆ ಪೂರ್ವ ಬೀಜೋಪಚಾರ ಮಾಡಿದರೆ ಶೇ. ೯೦ರಷ್ಟು ಕೀಟದಿಂದ ಮುಕ್ತಿ ಹೊಂದಬಹುದು. ರೋಣ ನರೇಗಲ್ಲ ಹಾಗೂ ಹೊಳೆಆಲೂರ ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿ ದರದಲ್ಲಿ ಬೀಜ ಲಭ್ಯವಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಸಂಜಯ್ ದೊಡ್ಡಮನಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವರಾಜ ನವಲಗುಂದ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ಮುತ್ತಣ್ಣ ಚೌಡರಡ್ಡಿ, ಬಸನಗೌಡ ರಬ್ಬನಗೌಡ್ರ, ಕೃಷಿ ಸಹಾಯಕ ನಿರ್ದೇಶಕ ಎಸ್.ಎಫ್. ತಹಶೀಲ್ದಾರ್, ಕೃಷಿ ಅಧಿಕಾರಿಗಳು, ರೈತರು ಮತ್ತಿತರರು ಉಪಸ್ಥಿತರಿದ್ದರು.
