ವಿಜಯ ಸಿಂಧೂರ ರೋಣ
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಜರುಗುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಪ್ರತಿ ಬೂತ್‌ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಯುವಕರು ಪ್ರಮುಖ ಪಾತ್ರವಹಿಸಬೇಕಿದೆ. ಇದಕ್ಕಾಗಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕ್ರಷ್ಣಗೌಡ ಪಾಟೀಲ ಹೇಳಿದರು.

ಶನಿವಾರ ಪಟ್ಟಣದಲ್ಲಿರುವ ಮಾಜಿ ಸಂಸದ ಆರ್.ಎಸ್.ಪಾಟೀಲರ ಜಿನ್ನಿಂಗ್ ಫ್ಯಾಕ್ಟರಿ ಆವರಣದಲ್ಲಿರುವ ಸಭಾಭವನದಲ್ಲಿ ಜರುಗಿದ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು ಯುವ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಯುವಕರು ಸಂಘಟಿತರಾಗಿ ರಾಜ್ಯದ ಪ್ರತಿ ಗ್ರಾಮ ಮತ್ತು ಭೂತ ಮಟ್ಟದಲ್ಲಿ ಉತ್ತಮ ಕೆಲಸ ಮಾಡಿ ಯುವ ಕಾಂಗ್ರೆಸ್ ಪದಾಧಿಕಾರಿಗಳ ಉನ್ನತ ಸ್ಥಾನಕ್ಕೇರಬೇಕು ಎಂದು ತಿಳಿಸಿದರು.
ರಾಜ್ಯಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಭದ್ರಬುನಾದಿ ಹಾಕಿರುವುದನ್ನು ಯುವಕರಿಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಚುನಾವಣೆಯಲ್ಲಿ ಭರವಸೆ ನೀಡಿದ್ದ ಪಂಚ ಗ್ಯಾರಂಟಿ ಅನುಷ್ಠಾನದ ಜೊತೆಗೆ ಅಭಿವೃದ್ಧಿ ಕಾರ್ಯ ಮಾಡಿ ಜನರ ಮನ ಗೆದ್ದಿದೆ. ಸರಕಾರಧ ಸಾಧನೆಗಳನ್ನು ಪ್ರತಿ ಮನೆಮನೆಗೆ ತೆರಳಿ ತಿಳಿವಳಿಕೆ ನೀಡಬೇಕು ಎಂದರು.

ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ವಿವೇಕ್ ಯಾವಗಲ್ ಮಾತನಾಡಿ, ಪಕ್ಷದ ಸಂಘಟನೆ ಜೊತೆಗೆ ಸಮಾಜಮುಖಿ ಕಾರ್ಯ ಮಾಡಿ ಜನರ ವಿಶ್ವಾಸ ಗಳಿಸುವಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಗಮನ ಹರಿಸಬೇಕು. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ಮಾಡುವ ಮುಖಾಂತರ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ತಿಳಿಸಿದರು.
ರೋಣ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮುತ್ತುರಾಜ ನವಲಗುಂದ ಮಾತನಾಡಿ, ದೇಶದಲ್ಲಿ ಯುವ ಜನಾಂಗ ಜಾತಿ, ಧರ್ಮದ ಹೆಸರಲ್ಲಿ ಭವಿಷ್ಯ ಮರೆತು ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ದೇಶದ ಭವಿಷ್ಯವಾಗಿರುವ ಯುವ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಅಗತ್ಯವಿರುವ ಜಾಗೃತಿ ಮೂಡಿಸಿ ಸರಿದಾರಿಗೆ ತರಬೇಕಾದ ಅನಿವಾರ್ಯತೆ ಯುವ ಜನರ ಮೇಲಿದೆ. ಇದಕ್ಕೆಲ್ಲ ಹಿರಿಯರ ಮಾರ್ಗದರ್ಶನ ಮುಖ್ಯವಾಗಿದೆ ಎಂದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ವಿವೇಕ ಯಾವಗಲ್ಲ,ರಾಜ್ಯ ಕಾರ್ಯದರ್ಶಿ ರವಿಕಿರಣ್,ಕೀರ್ತಿರಾಜ,ಉದಯ ವೀರನಗೌಡ,ಅಹ್ಮದ್ ಖಾಜಿ,ವಾಣಿ ಹಿರೇಮಠ,ವೀರೇಶ ಚುಳಕಿ,ಮಹೇಶ ಕಳಸನ್ನವರ,ಅಸ್ಲಾಮ್ ಕೊಪ್ಪಳ,ಯಲ್ಲಪ್ಪ ಕಿರೇಸೂರ,ಗೋಪಿ ರಾಯನಗೌಡ್ರ,ಬಸವರಾಜ ಹೊಸಳ್ಳಿ,ಸೋಮು ನಾಗರಾಜ,ಅಪ್ಪುರಾಜ ನವಲಗುಂದ,ವಿನಾಯಕ ಜಕ್ಕನಗೌಡ್ರ ಸೇರಿದಂತೆ ಯುವ ಕಾಂಗ್ರೆಸ್ ಸಮಿತಿ ಸರ್ವ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
