ವಿಜಯ ಸಿಂಧೂರ ಬೆಂಗಳೂರು
ರೇಷ್ಮೆ ಲಾಭದಾಯಕವಾದ ಕಸುಬಾಗಿದ್ದು, ಕೃಷಿ ಜತೆಗೆ ಅದನ್ನು ಉಪಕಸುಬನ್ನಾಗಿ ಅಳವಡಿಸಿಕೊಳ್ಳಲು ಉತ್ತೇಜನ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಓಕಳೀಪುರದಲ್ಲಿ ರೇಷ್ಮೆ ಮತ್ತು ಖನಿಜ ಭವನ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ರಾಜ್ಯದಲ್ಲಿ ಸುಮಾರು 1.50 ಲಕ್ಷ ಕುಟುಂಬಗಳು ರೇಷ್ಮೆಯನ್ನು ಅವಲಂಬಿಸಿವೆ. ಕೃಷಿಯಿಂದ ವಿಮುಖರಾಗುತ್ತಿರುವ ಯುವಜನರನ್ನು ಸೆಳೆಯಲು ರೇಷ್ಮೆ, ತೋಟಗಾರಿಕೆ, ಪಶುಸಂಗೋಪನೆಗೆ ಸರ್ಕಾರ ಒತ್ತು ನೀಡುತ್ತಿದೆ’ ಎಂದರು.
‘ದೇಶದಲ್ಲಿ ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ದ್ವಿತಳಿ ರೇಷ್ಮೆಗೆ ಹೆಚ್ಚು ಬೇಡಿಕೆ ಇದೆ. ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ದ್ವಿತಳಿ ರೇಷ್ಮೆ ಬೆಳೆಯಲು ನೆರವು ನೀಡಲು ಸಿದ್ಧರಿದ್ದೇವೆ. ನಮ್ಮ ಸರ್ಕಾರ ಬಂದ ನಂತರ ದ್ವಿತಳಿ ರೇಷ್ಮೆ ಸಾಗಣೆ ವೆಚ್ಚವನ್ನು ₹10ರಿಂದ ₹20ಕ್ಕೆ ಹೆಚ್ಚಿಸಿ, ರೇಷ್ಮೆ ಬೆಳೆಗಾರರ ಹೊರೆಯನ್ನು ತುಸು ಕಡಿಮೆ ಮಾಡಿದ್ದೇವೆ. ರೇಷ್ಮೆ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ರೀತಿಯ ವೈಜ್ಞಾನಿಕ ನೆರವನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದರು.
ಇತರೆ ಇಲಾಖೆಗಳಿಗೂ ಸ್ಥಳಾವಕಾಶ: ‘ರೇಷ್ಮೆ ಇಲಾಖೆಯು ಓಕಳೀಪುರದಲ್ಲಿ 4 ಎಕರೆ 25 ಗುಂಟೆ ವಿಸ್ತೀರ್ಣದ ಜಮೀನನ್ನು 1995ರಲ್ಲಿ ಖರೀದಿಸಿತ್ತು. ರೇಷ್ಮೆ ಇಲಾಖೆಗೆ ಸೇರಿದ ಜಾಗದಲ್ಲಿ, ಖನಿಜ ನಿಗಮದಿಂದ 13 ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿದೆ. ರೇಷ್ಮೆ ಇಲಾಖೆಗೆ ಅಗತ್ಯವಿರುವಷ್ಟು ಜಾಗವನ್ನು ಬಳಸಿಕೊಂಡು, ಇತರೆ ಇಲಾಖೆಗಳಿಗೂ ಈ ಕಟ್ಟಡದಲ್ಲಿ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ’ ಎಂದು ಹೇಳಿದರು.
‘₹666.75 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಮೂರು ವರ್ಷಗಳಲ್ಲಿ ಕಾಮಗಾರಿ ಮುಗಿಸಬೇಕು ಮತ್ತು ಕಟ್ಟಡವು ಸದೃಢವಾಗಿರಬೇಕು. ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸದೇ ಇದ್ದರೆ, ನಿಮ್ಮ ವಿರುದ್ಧ ಕ್ರಮವಹಿಸಲಾಗುವುದು’ ಎಂದು ಸ್ಥಳದಲ್ಲಿ ಇದ್ದ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಸಚಿವರಾದ ದಿನೇಶ್ ಗುಂಡೂರಾವ್, ಕೆ.ವೆಂಕಟೇಶ್, ಖನಿಜ ನಿಗಮದ ಅಧ್ಯಕ್ಷರಾದ ಜಿ.ಎಸ್.ಪಾಟೀಲ್, ಉಪಾಧ್ಯಕ್ಷರಾದ ಹೆಚ್.ಲಕ್ಷ್ಮಣ್, ಖನಿಜ ಅಭಿವೃದ್ಧಿ ನಿಗಮದ ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
