ವಿಜಯ ಸಿಂಧೂರ ಗದಗ
ಗದುಗಿನ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಭಾನುವಾರ ಮಹಾ ಅವಘಡ ಸಂಭವಿಸಿದೆ. ಬ್ರೇಕ್ ಡ್ಯಾನ್ಸ್ ತೊಟ್ಟಿಲು ಮುರಿದು ಬಿದ್ದು ಸುಮಾರು 20 ಮಂದಿಗೆ ಗಾಯಾಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ನಗರದ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಈ ದುರ್ಘಟನೆ ನಡೆದಿದ್ದು, ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕಳೆಪೆ ಗುಣಮಟ್ಟದ ಬ್ರೇಕ್ ಡ್ಯಾನ್ಸ್ ಅಳವಡಿಸಿದ್ದ ಆರೋಪ ಕೇಳಿಬಂದಿದ್ದು, ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅತಿಯಾದ ಜನದಟ್ಟಣೆ:

ಪ್ರತ್ಯಕ್ಷದರ್ಶಿಗಳ ಪ್ರಕಾರ, ದುರ್ಘಟನೆ ಸಮಯದಲ್ಲಿ ತೊಟ್ಟಿಲಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಅಂದರೆ ಸುಮಾರು 40 ಜನರು ಕುಳಿತಿದ್ದರು.
ನಿರ್ಲಕ್ಷ್ಯದ ಆರೋಪ:
ರೈಡ್ ಆರಂಭವಾದ ಎರಡು ಸುತ್ತುಗಳ ನಂತರ ತೊಟ್ಟಿಲಿನಿಂದ ವಿಚಿತ್ರ ಶಬ್ದಗಳು ಕೇಳಿಬಂದಿದ್ದವು. ಸವಾರರು ಅಪಾಯದ ಮುನ್ಸೂಚನೆ ನೀಡಿ ನಿಲ್ಲಿಸುವಂತೆ ಕಿರುಚಿದರೂ, ಆಪರೇಟರ್ ರೈಡ್ ಮುಂದುವರಿಸಿದ್ದ ಎನ್ನಲಾಗಿದೆ.

ಕುಸಿತ:
ಕೆಲವೇ ಕ್ಷಣಗಳಲ್ಲಿ ತೊಟ್ಟಿಲಿನ ತಳಭಾಗವು ಬುಡಸಮೇತ ಕಿತ್ತುಬಂದು ಜೋರಾದ ಶಬ್ದದೊಂದಿಗೆ ನೆಲಕ್ಕೆ ಅಪ್ಪಳಿಸಿದೆ. ಇದರಿಂದಾಗಿ ಸವಾರರು ಕೆಳಕ್ಕೆ ಎಸೆಯಲ್ಪಟ್ಟಿದ್ದು, ಹಲವರು ಕಬ್ಬಿಣದ ರಾಡ್‌ಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು.

ರಕ್ಷಣಾ ಕಾರ್ಯ:
ಪೊಲೀಸರು ಮತ್ತು ಸ್ಥಳೀಯರು ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಆಂಬ್ಯುಲೆನ್ಸ್‌ಗಳ ಮೂಲಕ ಗದಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಜನರನ್ನು ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ವರದಿ: ರುದ್ರಪ್ಪ ಹೆಬ್ಬಳ್ಳಿ, ಗದಗ
