ವಿಜಯ ಸಿಂಧೂರ ರೋಣ
ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ಪವಿತ್ರವಾದ ಧಾರ್ಮಿಕ ಕ್ಷೇತ್ರ, ಸಹಸ್ರಾರು ಭಕ್ತರ ಮತ್ತು ಮಠಾಧೀಶರ ಆಶಿರ್ವಾದದೊಂದಿಗೆ ಸಾಮೂಹಿಕ ವಿವಾಹ ಬಂಧನಕ್ಕೊಳಗಾಗುವ ಭಾಗ್ಯ ಜೀವನದ ಸಾರ್ಥಕತೆಯ ಕ್ಷಣವಾಗಿದೆ .ಸಾಮೂಹಿಕ ವಿವಾಹಗಳ ಕುರಿತು ಕೀಳರಿಮೆ ವ್ಯಕ್ತಪಡಿಸದೇ ಮೇಲರಿಮೆ ಬೆಳೆಸಿಕೊಳ್ಳಬೇಕು ಎಂದು ಸಿದ್ದವೀರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಅವರು ಸೋಮವಾರ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಅಡವಿ ಸಿದ್ದೇಶ್ವರರ ೭೧ನೇ ಪುಣ್ಯ ಸ್ಮರಣೋತ್ಸವ ಹಾಗೂ ರಾಜಶೇಖರ ಶಿವಯೋಗಿಗಳ ೨೫ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ಒಂದು ಭಿನ್ನ ಪರಂಪರೆಯಿದ್ದು, ನಮ್ಮ ಜನಪದರು ದವಸ ಧಾನ್ಯಗಳ ಬಗ್ಗೆ ಅಷ್ಟಾಗಿ ಪದ ಕಟ್ಟಿ ಹಾಡಲಿಲ್ಲ. ಬೆಳಗಾಗ್ಗೆ ಎದ್ದು ಎಳ್ಳುಜೀರಿಗೆ ಬೆಳೆವ ಭೂತಾಯಿಯನ್ನು ಅರೆಗಳಿಗೆಯಾದರೂ ನೆನೆಯಬೇಕು ಎಂದು ಹಾಡಿದ್ದಾರೆ. ಇದರ ಉದ್ದೇಶ ಆರಂಭದಿಂದ ಅಂತಿಮದವರೆಗೂ ಪರಸ್ವರ ದ್ವೇಷಿಸದೇ ಸುಖದ ಜೀವನ ನಡೆಸುವುದಾಗಿದೆ, ಸಾಮೂಹಿಕ ವಿವಾಹ ಆಗುವುದು ಎಂದರೆ ಇಂದಿನ ದಿನಗಳಲ್ಲಿ ಕೀಳು ಎಂಬ ಭಾವನೆಯಿದೆ, ಅದು ನಿಜಕ್ಕೂ ತಪ್ಪು ಕಲ್ಪನೆ, ಮಠ ಮಾನ್ಯಗಳು ಆಯೋಜಿಸುವ ಸಾಮೂಹಿಕ ವಿವಾಹಗಳು ಮಾನವರ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿಯೊಬ್ಬರು ಇದರಲ್ಲಿ ಪಾಲ್ಗೊಂಡು ವಿವಾಹವಾಗುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದರು.
ಅಡವಿ ಸಿದ್ದೇಶ್ವರಮಠದ ಗಂಗಾಧರ ಶ್ರೀಗಳು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪ್ರಪ್ರಥಮ ಸಾಮೂಹಿಕ ವಿವಾಹ ಕಾರ್ಯ ಹಮ್ಮಿಕೊಂಡ ಕೀರ್ತಿ ಶ್ರೀಮಟಕ್ಕೆ ಸಲ್ಲುತ್ತದೆ.ಹಿರಿಯ ಶ್ರೀಗಳ ಆಶಿರ್ವಾದ,ಭಕ್ತರ ಸಹಾಯ ಸಹಕಾರದಿಂದ ಪ್ರತಿವರ್ಷ ಮದುವೆಗಳು ನಡೆಯುತ್ತವೆ. ಭೂಮಿಯ ಮೇಲೆ ಹುಟ್ಟಿದ ಸರ್ವರೂ ಮದುವೆಯಾಗಬೇಕು.ಆದರೆ, ದುಡಿಯದ ದರಿದ್ರ, ರೋಗಿ, ವೈರಾಗಿ, ಚಟಗಾರ ಈ ನಾಲ್ವರನ್ನು ಮದುವೆ ಎಂಬ ಪವಿತ್ರ ಬಂಧನದಿಂದ ದೂರವಿಡಬೇಕು.ವಿವಾಹ ಬಂಧನವೆಂದರೆ ಎರಡು ಮನಸ್ಸು, ಜೀವಗಳು ಒಂದಾಗಿ ಪರಸ್ಪರ ಹಾಲುಜೇನಿನಂತೆ ಅನ್ಯೂನ್ಯತೆಯಿಂದ ಜೀವನ ಸಾಗಿಸುವ ಅಮೂಲ್ಯ ಸಾಧನವಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳು ಪರಸ್ಪರ ಪ್ರೀತಿ,ವಿಶ್ವಾಸದಿಂದ ತಂದೆ,ತಾಯಿ, ಅತ್ತೆ-ಮಾವ,ಗುರು,ಹಿರಿಯಲ್ಲಿ ವಿಧೆಯತೆ, ತಾಳ್ಮೆಯಿಂದ ಆದರ್ಶಮಯ ಜೀವನಕ್ಕೆ ಅಣಿಯಾಗಬೇಕು.ಸಂಸಾರದ ಗುಟ್ಟು ಬಿಟ್ಟು ಪ್ರೀತಿ ತುಂಬಿದ ಸಂಸಾರದ ಜೋಡೆತ್ತಿನ ಬಂಡಿ ಸರಾಗವಾಗಿ ಸಾಗಿದಾಗ ಮಾತ್ರ ಆ ಮನೆ ಸ್ವರ್ಗವಾಗುತ್ತದೆ. ಸಂಪ್ರದಾಯ,ಸಂಸ್ಕೃತಿ, ಧರ್ಮಮಾರ್ಗ ಮತ್ತು ಮಠಮಾನ್ಯಗಳ ಸತ್ಸಂಗದೊಂದಿಗೆ ಸಾತ್ವಿಕ ಜೀವನಕ್ಕೆ ಹೊಂದಿಕೊಳ್ಳಬೇಕು ಎಂದರು.

ಹರ್ಲಾಪೂರ ಕೊಟ್ಟೂರೇಶ್ವರ ಮಠದ ಶ್ರೀಗಳು ಮಾತನಾಡಿ, ಮದುವೆಯ ಸಮಯದಲ್ಲಿ ಹಿಂದಿನ ಪದ್ದತಿಯಂತೆ ಪಂಚಾಂಗ ನೋಡುವುದು ಬಿಡಬೇಕು. ಸಾಲಾವಳಿ ತೆಗೆಸುವ ಮುನ್ನ ವದು,ವರರ ರಕ್ತ ಪರೀಕ್ಷೆ ಮಾಡಿಸಬೇಕು. ನಂತರ ವದು,ವರರ ಸಾಲಾವಳಿಯ ಬದಲಾಗಿ ಅತ್ತೆ,ಸೊಸೆಯ ಸಾಲಾವಳಿ ಸರಿ ಹೊಂದಿದರೆ ಆ ಮನೆ ಸ್ವರ್ಗವಾಗುತ್ತದೆ. ಯಾವುದೇ ಕಾರಣಕ್ಕೂ ಅನಾರೋಗ್ಯವಂತರ ಮದುವೆ ಮಾಡಬಾರದು. ಸಾಲ ಮಾಡಿ ಶ್ರೀಮಂತಿಕೆಯ ಲೆಕ್ಕಾಚಾರದಲ್ಲಿ ಮದುವೆ ಆಗದೇ ಸಾಮೂಹಿಕ ವಿವಾಗಳಲ್ಲಿ ಮದುವೆಯಾಗಬೇಕು. ವರದಕ್ಷಿಣಿ ಇಲ್ಲದೇ ಮದುವೆಯಾಗುವವನು ಮಾತ್ರ ನಿಜವಾದ ಗಂಡು, ಹೆಣ್ಣಿನ ಮನೆಯಿಂದ ಎಲ್ಲವನ್ನೂ ಪಡೆದುಕೊಳ್ಳುವವನು ಉತ್ತಮ ಗಂಡನಾಗಲಾರನು. ವರದಕ್ಷಣಿಯಂತಹ ಮಹಾ ಪೀಡುಗು ಈ ಸಮಾಜದಿಂದ ಬೇರು ಸಮೇತ ಕಿತ್ತುಹೋಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಬಾಲ್ಕಿ ಶ್ರೀಮಠದ ಪೂಜ್ಯರು ಮಾತನಾಡಿ, ಸಾಮೂಹಿಕ ವಿವಾಹಗಳಿಂದ ಬಡವರು ಮತ್ತು ಅಸಹಾಯಕರಿಗೆ ಆರ್ಥಿಕ ಹೊರೆ ತಪ್ಪಿಸಿದಂತಾಗುತ್ತಿದೆ. ಅನಾವಶ್ಯಕ ದುಂದು ವೆಚ್ಚ, ಆಡಂಬರ, ವರದಕ್ಷಣಿ ತಡೆದು ಸಾಮೂಹಿಕ ವಿವಾಹದ ಮಹತ್ವ ಸಾರುವ ಉದ್ದೇಶದಿಂದ ಕೊತಬಾಳದ ಪೂಜ್ಯರು ಗ್ರಾಮದಲ್ಲಿ ಹಲವು ದಶಕಗಳಿಂದ ಇಂತಹ ಮಹತ್ವದ ಕಾರ್ಯವನ್ನು ಗ್ರಾಮಸ್ಥರು ಒಗ್ಗಟ್ಟಿನಿಂದ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಸಾಮೂಹಿಕ ವಿವಾಹದಲ್ಲಿ ಶ್ರೀಗಳ ಆಶಿರ್ವಾದ ಬಲದಲ್ಲಿ ಮದುವೆಯಾಗುತ್ತಿರುವ ನವಜೋಡಿಗಳ ಬಾಳು ಬೆಳಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಗುಲಗಂಜಿಮಠದ ಗುರುಪಾದ ಶ್ರೀಗಳು, ಬಸವಲಿಂಗ ಮಹಾಸ್ವಾಮಿಗಳು,ಚನ್ನಬಸವ ಮಹಾಸ್ವಾಮಿಗಳು, ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು,ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳು,ಗುರುಸಿದ್ದೇಶ್ವರ ಮಹಾಸ್ವಾಮಿಗಳು,ಕೈಲಾಸಲಿಂಗ ಮಹಾಸ್ವಾಮಿಗಳು, ಶಿವಣ್ಣ ಪಲ್ಲೇದ, ಮಲ್ಲಣ್ಣ ಯಲಿಗಾರ,ಶೇಖಣ್ಣ ಯಲಿಗಾರ,ಶಂಕರಣ್ಣ ಸಂಕಣ್ಣವರ,ವೀರಣ್ಣ ಯಾಳಗಿ,ಮುತ್ತು ಅಸೂಟಿ, ಸಂಗಣ್ಣ ಮುದಗಲ್, ಮುತ್ತಣ್ಣ ಉಣಚಗೇರಿ,ಶೇಖಣ್ಣ ಕೋರಿ,ಶಿದ್ದು ಯಾಳಗಿ,ಸೇರಿದಂತೆ ಪ್ರಮುಖರು ಹಾಗೂ ಊರಿನ ಹಿರಿಯರು ಯುವಕರು ಉಪಸ್ಥಿತರಿದ್ದರು.
