ವಿಜಯ ಸಿಂಧೂರ ತಾಳಿಕೋಟೆ
ಪ್ರಕೃತಿ ಮಾನವನಿಗೆ ಬದುಕಲು ಅಗತ್ಯವಿರುವ ಎಲ್ಲವನ್ನೂ ಉಚಿತವಾಗಿ ನೀಡಿದೆ. ಆದರೆ ಮಾನವನು ಪ್ರತಿಯಾಗಿ ಪ್ರಕೃತಿಗೆ ಕಸ, ಮಾಲಿನ್ಯ ಹಾಗೂ ವಿಷಕಾರಿ ವಾಯುವನ್ನು ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದನ್ನು ತಡೆದು ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನಿವೃತ್ತ ಶಿಕ್ಷಕ ರೋಷನ ಡೋಣಿ ಹೇಳಿದರು.

ಪಟ್ಟಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ಥಳೀಯ ಜಮಾತೆ ಇಸ್ಲಾಮಿ ಹಿಂದ್ ಮತ್ತು ಹಸಿರು ಸಂಪದ ಬಳಗ ಅವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾದ ಪರಿಸರ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
ಪರಿಸರ ಎಂದರೆ ಕೇವಲ ಕಾಡು-ಮೇಡುಗಳಷ್ಟೇ ಅಲ್ಲ, ನಾವು ಉಸಿರಾಡುವ ಗಾಳಿ, ಕುಡಿಯುವ ನೀರು ಮತ್ತು ವಾಸಿಸುವ ಭೂಮಿಯೂ ಸೇರಿ ಸಮಗ್ರ ಪರಿಸರವಾಗಿದೆ. ಪ್ಲಾಸ್ಟಿಕ್ ದುರುಪಯೋಗ ಮತ್ತು ಗುಟ್ಕಾ ಸೇವನೆಯಿಂದ ಉಂಟಾಗುವ ಮಾಲಿನ್ಯ ಪರಿಸರಕ್ಕೆ ಹಾನಿ ಉಂಟುಮಾಡುತ್ತಿದೆ. ಇದನ್ನು ತಡೆಯಲು ಪ್ರತಿಯೊಬ್ಬರೂ ತಮ್ಮಿಂದಲೇ ಜಾಗೃತಿ ಮೂಡಿಸಬೇಕು ಎಂದು ಅವರು ಕರೆ ನೀಡಿದರು.
ಹಸಿರು ಸಂಪದ ಬಳಗದ ಸದಸ್ಯ ಗುಂಡೂರಾವ್ ಧನಪಾಲ ಮಾತನಾಡಿ, ಭೂಮಿ ಮಾನವನಿಗೆ ವಾಸಿಸಲು ಇರುವ ಏಕೈಕ ಗ್ರಹವಾಗಿದ್ದು, ಇದರ ಸಂರಕ್ಷಣೆ ಅತ್ಯವಶ್ಯಕವಾಗಿದೆ. ಮಾನವನ ಅತಿಯಾದ ಆಸೆ ಮತ್ತು ಅರಣ್ಯ ನಾಶದಿಂದ ಪರಿಸರ ದಿನದಿಂದ ದಿನಕ್ಕೆ ಹಾನಿಗೊಳಗಾಗುತ್ತಿದೆ. ಗಿಡಮರಗಳ ಸಂರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಹೇಳಿದರು.

ರಿಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಎಸ್. ನಮಾಜಕಟ್ಟಿ ಅವರು, ಜಮಾತೆ ಇಸ್ಲಾಮಿ ಹಿಂದ್ ಮತ್ತು ಹಸಿರು ಸಂಪದ ಬಳಗ ನಡೆಸುತ್ತಿರುವ ಜಾಗೃತಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಉಪ ತಹಸಿಲ್ದಾರ್ ಅನೀಲ ಚೌಹಾಣ, ಧಾರ್ಮಿಕ ಮುಖಂಡರಾದ ಸೈಯದ ಶಕೀಲ ಅಹ್ಮದ್ ಖಾಜಿ, ಮೌಲಾನಾ ಅಜರುದ್ದೀನ್ ಖಾಸಮಿ, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮುಜಾಹೀದ ನಮಾಜಕಟ್ಟಿ, ಈದ್ಗಾ ಕಮಿಟಿ ಅಧ್ಯಕ್ಷ ಮಾಸೂಮಸಾಬ ಕೆಂಭಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
