ವಿಜಯ ಸಿಂಧೂರ ತಾಳಿಕೋಟೆ
ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ತಾಳಿಕೋಟೆಯ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಅಂಬೇಡ್ಕರ್ ಅವರನ್ನು ಕೇವಲ ಪೂಜೆಗೆ ಸೀಮಿತಗೊಳಿಸದೆ, ಅವರ ಆದರ್ಶಗಳನ್ನು ಅನುಸರಿಸಬೇಕು” ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ. ದಮ್ಮೂರಮಠ ಅಭಿಪ್ರಾಯಪಟ್ಟರು.

ಅವರು ಮಾತನಾಡಿ, ಅಂಬೇಡ್ಕರ್ ಅವರು ಭಾರತದ ಏಕತೆ, ವೈವಿಧ್ಯತೆ, ಸಮಗ್ರತೆ ಮತ್ತು ಸಮಾನತೆಗೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕರು ಎಂದು ಹೇಳಿದರು. ಶೋಷಿತ ವರ್ಗವನ್ನು ಮುಖ್ಯವಾಹಿನಿಗೆ ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅವರು, “ಶಿಕ್ಷಣ–ಸಂಘಟನೆ–ಹೋರಾಟ” ಎಂಬ ಮೂಲ ಮಂತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಆದರೆ ಇಂದಿನ ಸಮಾಜದಲ್ಲಿ ಶಿಕ್ಷಣವನ್ನು ಕಡೆಗಣಿಸಿ ಉಳಿದ ಅಂಶಗಳಿಗೆ ಮಾತ್ರ ಒತ್ತು ನೀಡುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಸಮಾಜದಲ್ಲಿ ಸಾಕ್ಷರತೆ ಪ್ರಮಾಣ ಇನ್ನೂ ಕಡಿಮೆ ಇರುವ ಹಿನ್ನೆಲೆ, ಜಯಂತಿ ಸಂದರ್ಭದಲ್ಲಿ ಆತ್ಮಾವಲೋಕನ ಮಾಡಿಕೊಂಡು ಸಮುದಾಯದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ದಲಿತ ಮುಖಂಡರಾದ ದೇವೇಂದ್ರ .ಬಿ. ಹಾದಿಮನಿ ಹಾಗೂ ಜೈಭೀಮ್ ಮುತ್ತಗಿ ಮಾತನಾಡಿ, ಅಂಬೇಡ್ಕರ್ ಅವರು ದೇಶಕ್ಕೆ ವಿಶ್ವಶ್ರೇಷ್ಠ ಸಂವಿಧಾನ ನೀಡಿದ ಮಹಾನ್ ನಾಯಕರು. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಪ್ರಯತ್ನಗಳು ನಡೆಯುತ್ತಿರುವುದು ನೋವಿನ ಸಂಗತಿ ಎಂದರು. ಅವರು ಸರ್ವಜನರ ಆಶಾಕಿರಣವಾಗಿದ್ದು, ದೇಶದ ಭವಿಷ್ಯದ ಪಥಪ್ರದರ್ಶಕರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ತಾಲೂಕ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಅನಸೂಯಾ ಚಲವಾದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಾಜು ವಿಜಾಪುರ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ತಹಶೀಲ್ದಾರ್ ಡಾ. ವಿನಯಾ ಹೂಗಾರ ನೇತೃತ್ವದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ, ಪಿಎಸ್‌ಐ ಜ್ಯೋತಿ ಖೋತ, ವ್ಯವಸ್ಥಾಪಕ ಶಿವಲಿಂಗಪ್ಪ ಹಚಡದ ಸೇರಿದಂತೆ ಹಲವು ಅಧಿಕಾರಿಗಳು, ಮುಖಂಡರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
