ಗ್ಯಾಸ್ ಏಜನ್ಸಿ ಕೊರತೆ: ತಹಶೀ ಲ್ದಾರ್‌ಗೆ ದಲಿತ ಸಂಘರ್ಷ ಸಮಿತಿ ಮನವಿ

ವಿಜಯ ಸಿಂಧೂರ, ತಾಳಿಕೋಟೆ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಚಂದ್ರಕಾಂತ ಎಸ್. ಕಾದ್ರೊಳ್ಳಿ ಬಣದ ತಾಳಿಕೋಟೆ ತಾಲೂಕು ಸಮಿತಿಯಿಂದ ಬುಧವಾರ ತಹಶೀಲ್ದಾರ್ ಅವರಿಗೆ ಮಹತ್ವದ ಮನವಿ ಸಲ್ಲಿಸಲಾಯಿತು.

ತಾಳಿಕೋಟೆ ತಾಲ್ಲೂಕಿನಲ್ಲಿ ಗೃಹ ಬಳಕೆಯ ಗ್ಯಾಸ್ ಏಜನ್ಸಿ/ಡೀಲರ್ ಇಲ್ಲದಿರುವುದರಿಂದ ಸಾರ್ವಜನಿಕರು ಗಂಭೀರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಹಿಂದಿನ ವರ್ಷಗಳಲ್ಲಿ ತಾಳಿಕೋಟಿಯಲ್ಲಿ ಗ್ಯಾಸ್ ಡೀಲರ್ ಕಾರ್ಯನಿರ್ವಹಿಸುತ್ತಿದ್ದರೂ, ಸುಮಾರು 4-5 ವರ್ಷಗಳ ಹಿಂದೆ ವೈಯಕ್ತಿಕ ಕಾರಣಗಳಿಂದ ಅದು ಸ್ಥಗಿತಗೊಂಡಿದೆ.ಪ್ರಸ್ತುತ ಕಲಕೇರಿಯಿಂದ ಗ್ರಾಮೀಣ ವಿತರಕ ಎಮ್. ಕೆ.ದೇಸಾಯಿ ಅವರ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಗ್ಯಾಸ್ ವಿತರಣೆ ನಡೆಯುತ್ತಿದೆ. ಆದರೆ ಈ ವಿತರಣೆಯಲ್ಲಿ ಸರಿಯಾದ ಕ್ರಮ ಪಾಲನೆಯಿಲ್ಲದೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು, ಗ್ಯಾಸ್ ಬುಕ್ಕಿಂಗ್ ಮತ್ತು ವಿತರಣೆಯಲ್ಲಿ ವಿಳಂಬವಾಗುತ್ತಿರುವುದು ಹಾಗೂ ತುರ್ತು ಅವಶ್ಯಕತೆಯ ಸಂದರ್ಭಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ತಾಳಿಕೋಟಿಯಲ್ಲಿ ಹೊಸ ಗ್ಯಾಸ್ ಏಜನ್ಸಿ/ಡೀಲರ್ ನೇಮಕ ಮಾಡುವಂತೆ ಅರ್ಜಿ ಆಹ್ವಾನಿಸಿ, ಸಾರ್ವಜನಿಕರ ಸಮಸ್ಯೆಯನ್ನು ತಕ್ಷಣ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ರಮೇಶ್ ಯ. ದೊಡಮನಿ (ಸಾಸನೂರ), ಪ್ರಧಾನ ಕಾರ್ಯದರ್ಶಿ ಬಸವರಾಜ ಹ. ತೋಟದ (ತಮದಡ್ಡಿ), ಕಾರ್ಯದರ್ಶಿ ಶಂಕ್ರಪ್ಪ ಯ. ದೊಡಮನಿ (ಸಾಸನೂರ), ಶೇಖಪ್ಪ ಕಟ್ಟಿಮನಿ (ಕರಾಗನೂರ), ಮಲ್ಲಪ್ಪ ಶಿರೋಳ (ತಾಳಿಕೋಟಿ), ಯಮನಪ್ಪ ಮಾದರ (ಹೂವಿನಳ್ಳಿ), ಕಾಶೀನಾಥ ಕಟ್ಟಿಮನಿ (ತಾಳಿಕೋಟಿ), ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷರಾದ ಗೋಪಾಲ ಕಟ್ಟಿಮನಿ (ತಾಳಿಕೋಟಿ), ಜಿಲ್ಲಾ ಉಪಾಧ್ಯಕ್ಷರಾದ ಬಸ್ಸು ಇ. ಕಟ್ಟಿಮನಿ (ತಾಳಿಕೋಟಿ), ಶೇಖಪ್ಪ ಮಾದರ (ಹಗರಗುಂಡ) ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!