ಠರಾವು ತನಿಖಾ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯಿಸಿ ಮನವಿ

ವಿಜಯ ಸಿಂಧೂರ ತಾಳಿಕೋಟೆ

ತಾಲೂಕಿನ ಕಲಕೇರಿ ಗ್ರಾಮ ಪಂಚಾಯತಿಯಲ್ಲಿ ಸದಸ್ಯರ ಗಮನಕ್ಕೆ ತರದೇ ಕೈಗೊಂಡ ಎರಡು ಠರಾವುಗಳನ್ನು ತನಿಖೆಯ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯಿಸಿ, ಗ್ರಾಮ ಪಂಚಾಯತ್ ಸದಸ್ಯರು ಬುಧವಾರ ಜಿಪಂ ಸಿಇಒ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಪತ್ರದಲ್ಲಿ, ಮೀಟಿಂಗ್ ನಂ. 9 (ದಿನಾಂಕ 05-07-2025) ಹಾಗೂ ಮೀಟಿಂಗ್ ನಂ. 10 (ದಿನಾಂಕ 27-11-2025) ರಲ್ಲಿ ಕೈಗೊಂಡಿರುವ ಎರಡು ಠರಾವುಗಳು ಸಭೆ ನಡೆಸದೇ ಅನಧಿಕೃತವಾಗಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಒಟ್ಟು 28 ಸದಸ್ಯರಿರುವ ಪಂಚಾಯತಿಯಲ್ಲಿ, ಆ ದಿನ ಸಭೆ ನಡೆದಿರುವ ಯಾವುದೇ ದಾಖಲೆ ಇಲ್ಲದೆ, ಹಾಜರಿದ್ದ ಸದಸ್ಯರ ವಿವರ, ಸೂಚಕರು ಹಾಗೂ ಅನುಮೋದಕರ ಹೆಸರುಗಳು ಕೂಡ ನಮೂದಿಸಿಲ್ಲ ಎಂದು ಸದಸ್ಯರು ತಿಳಿಸಿದ್ದಾರೆ.

ಇದಲ್ಲದೆ, ಠರಾವು ಪುಸ್ತಕದ ಕೆಲವು ಪುಟಗಳನ್ನು ಹರಿದು ಹಾಕಿರುವುದಾಗಿ ಹಾಗೂ 10-03-2026 ರಂದು ತನಿಖಾಧಿಕಾರಿಗಳು ಭೇಟಿ ನೀಡಿದ ನಂತರ ಈ ಠರಾವುಗಳನ್ನು ಹಿಂಬಾಲವಾಗಿ ಸೇರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇನ್ನಷ್ಟು ಗಂಭೀರ ಆರೋಪವಾಗಿ, 15ನೇ ಹಣಕಾಸಿನ ಯೋಜನೆಯಡಿ 11 ಅಂಗಡಿಗಳನ್ನು ನಿರ್ಮಿಸಿರುವುದಾಗಿ ದಾಖಲೆಗಳಲ್ಲಿ ನಮೂದಿಸಿರುವುದಾದರೂ, ವಾಸ್ತವದಲ್ಲಿ ಯಾವುದೇ ಹೊಸ ಅಂಗಡಿಗಳನ್ನು ನಿರ್ಮಿಸಿಲ್ಲ ಎಂದು ಹೇಳಲಾಗಿದೆ. ಈಗಿರುವ 66 ಅಂಗಡಿಗಳಲ್ಲಿ 73 ಜನರು ನಿರ್ಮಿಸಿಕೊಂಡ ಅಂಗಡಿಗಳೇ ಇದ್ದು, ಸರ್ಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಈ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯತ್ ಅಧ್ಯಕ್ಷ ಅಹಮದ್ ಶಿರಸಗಿ, ಪಿಡಿಒ, ಕೆಲವು ಸದಸ್ಯರು ಹಾಗೂ ಗುತ್ತಿಗೆದಾರರು ಸೇರಿ ಅನುದಾನ ದುರುಪಯೋಗ ಮಾಡಿಕೊಂಡಿರುವುದಾಗಿ ಆರೋಪಿಸಿ,

ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಜೊತೆಗೆ ದುರುಪಯೋಗಗೊಂಡ 15ನೇ ಹಣಕಾಸಿನ ಅನುದಾನವನ್ನು ಪಂಚಾಯತಿಗೆ ಮರಳಿ ಜಮೆ ಮಾಡುವಂತೆ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸದಸ್ಯರಾದ ಎಸ್.ಬಿ. ಮೋಪುಗಾರ, ಶೋಭಾ ವಿ. ರಾಠೋಡ, ಎಸ್.ಎ. ದೇಸಾಯಿ, ರಜಿಯಾ ನಾಯ್ಕೋಡಿ, ಆನಂದ್ ಅಡಕಿ, ಡಿ.ಸಿ. ಬಡಿಗೇರ, ಈರಘಂಟೆಪ್ಪ ಬಡಿಗೇರ, ನಿಂಗಮ್ಮ ಹೆಗ್ಗಣದೊಡ್ಡಿ, ಭೀಮಣ್ಣ ವಡ್ಡರ, ದ್ಯಾವಪ್ಪ ಹರಿಜನ ಹಾಗೂ ಮಕ್ತುಂಬಿ ಹೊನ್ನಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!