ವಿಜಯ ಸಿಂಧೂರ, ಮುಂಡರಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೆತ್ರತ್ವದ ರಾಜ್ಯ ಸರ್ಕಾರ
ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವುದಕ್ಕಾಗಿ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ,ಯುವನಿಧಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಹೇಳಿದರು

ಅವರು ಶನಿವಾರ ರೋಣ ವಿಧಾನಸಭಾ ಮತಕ್ಷೇತ್ರದ ಡಂಬಳ ಹೊಬಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ʼಸರ್ಕಾರದ ಯೋಜನೆಗಳ ಲಾಭ ಎಲ್ಲಾ ಜನರಿಗೆ ಸಿಗಬೇಕಾದರೆ ಹೆಚ್ಚಿನ ಪ್ರಚಾರ ಮಾಡಬೇಕಿದೆ. ಈಗಾಗಲೇ ಈ ಯೋಜನೆಗಳ ಲಾಭ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಅಕ್ಕ-ಪಕ್ಕದವರಿಗೂ ಈ ಮಾಹಿತಿ ನೀಡಬೇಕು. ರೋಣ ವಿಧಾನಸಭಾ ಮತಕ್ಷೇತ್ರದಲ್ಲಿ ಶೇ.95% ಪ್ರತಿಶತ ಪಂಚ ಗ್ಯಾರಂಟಿ ಯೋಜನೆಗಳು ಅನುಷ್ಠಾನವಾಗಿವೆʼಇನ್ನುಳಿದ ಶೇ.5ರಷ್ಟು ಜನರಿಗೂ ಯೋಜನೆ ತಲುಪಿಸಲು ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದರು.

ʼಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ದೂರು, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜನೆ ಮಾಡಬೇಕು ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಮಟ್ಟದ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ತಾಲ್ಲೂಕು ಮಟ್ಟದಲ್ಲಿ ಜನರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಯೋಜನೆಗಳ ಲಾಭ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕುʼ ಎಂದು ಹೇಳಿದರು.

ʼಗೃಹಜ್ಯೋತಿ ಯೋಜನೆಗಳ ಲಾಭ ಪಡೆಯುತ್ತಿರುವ ಫಲಾನುಭವಿಗಳಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದರ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಶಕ್ತಿ ಯೋಜನೆ ಅಡಿ ಜಿಲ್ಲೆಯಲ್ಲಿ ಪ್ರತಿದಿನ ಲಕ್ಷಕ್ಕೂ ಅಧಿಕ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಬಸ್‌ಗಳ ಸಮಯ ಬದಲಾಯಿಸಿ ಮಕ್ಕಳಿಗೆ ಅನುಕೂಲವಾಗುವಂತೆ ಮಾಡಬೇಕುʼ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ʼಯುವ ನಿಧಿ ಯೋಜನೆ ನೊಂದಣಿ ಕಡಿಮೆಯಾಗಿದೆ. ಈ ಕುರಿತು ಹೆಚ್ಚಿನ ಪ್ರಚಾರ ನೀಡುವ ಮೂಲಕ ನಿರುದ್ಯೋಗ ಯುವಕ-ಯುವತಿಯರಿಗೆ ಈ ಯೋಜನೆ ಲಾಭ ಹೆಚ್ಚಿನ ರೀತಿಯಲ್ಲಿ ಪಡೆಯುವಂತಾಗಬೇಕು. ಯುವ ನಿಧಿ ಯೋಜನೆ ಅಧಿಕಾರಿ ಕಾಲೇಜುಗಳಲ್ಲಿ ಈ ಕುರಿತು ಮಾಹಿತಿ ನೀಡಬೇಕು. ಯುವನಿಧಿ ಯೋಜನೆ ಅಡಿಯಲ್ಲಿ ನೋಂದಣಿಯಾದ ಯುವಕರಿಗೆ ಕೌಶಲ್ಯ ತರಬೇತಿ ನೀಡಬೇಕುʼ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ ಮಾತನಾಡಿ, ʼಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಯಾವುದೇ ದೂರುಗಳು ಬಂದರೆ ಲಿಖಿತವಾಗಿ ಮತ್ತು ನಿಖರವಾಗಿ ಮಾಹಿತಿ ನೀಡಿದರೆ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗಲಿದೆ. ಎಲ್ಲರೂ ಸೇರಿ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಜಿಲ್ಲೆಯ ಜನರಿಗೆ ತಲುಪಿಸುವ ಕೆಲಸ ಮಾಡೋಣʼ ಎಂದರು
ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಸದಸ್ಯರು ಪ್ರತಿ ತಿಂಗಳು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಸಭೆಯಲ್ಲಿ ತಮ್ಮ ತಾಲೂಕು ವ್ಯಾಪ್ತಿಗೆ ಒಳಪಡುವ ಜನರಿಗೆ ಗ್ಯಾರಂಟಿ ಯೋಜನೆಗಳು ಸವಲತ್ತುಗಳು ದೊರಕುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು, ಒಂದು ವೇಳೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ದೊರಕದೇ ಇರುವುದು ಕಂಡುಬಂದಲ್ಲಿ ಸಂಬಂಧಿಸಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಿ, ಸೌಲಭ್ಯಗಳನ್ನು ಒದಗಿಸಿಕೊಡುವಂತೆ ತಿಳಿಸಿದರು.
ಪಂಚಾಯತ್ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಸೌಲಭ್ಯಕ್ಕಾಗಿ ತಾಂತ್ರಿಕ ದೋಷ, ದಾಖಲೆಗಳ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳನ್ನು ಗುರುತಿಸಬೇಕು, ಅವರಿಗೆ ಯೋಜನೆಯ ಸೌಲಭ್ಯ ದೊರೆಯುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ತಾಲೂಕು ಪಂಚ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಡಿ.ಡಿ. ಮೊರನಾಳ, ಹಾಗೂ ಪದಾಧಿಕಾರಿಗಳಾದ ಪುಲಕೇಶಗೌಡ ಪಾಟೀಲ, ವಿಶ್ವನಾಥ ಪಾಟೀಲ, ಗಣೇಶ ರಾಠೋಡ, ನಾಗರಾಜ ಸಜ್ಜನ, ಸುರೇಶ ಮಾಳಗಿಮನಿ, ಶ್ರೀಮತಿ ಭುವನೇಶ್ವರಿ ಕಲ್ಲಕುಟಿಗರ, ವ್ಹಿ.ಬಿ. ಸೋಮನಕಟ್ಟಿಮಠ ಹಾಗೂ ಕದಾಂಪೂರ, ಶಿವಾಜಿನಗರ ಗ್ರಾಮಗಳ ಕಾಂಗ್ರೆಸ್ ಮುಖಂಡರು,
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರು ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.
