ಸನಾತನ ಧರ್ಮ ಪುನರುಜ್ಜೀವನಕ್ಕೆ ಆದಿ ಶಂಕರಾಚಾರ್ಯರ ಕೊಡುಗೆ ಅಪಾರ: ಭೀಮರಾವ್

ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದ ಮಹಾನ್ ಆಚಾರ್ಯ ಶ್ರೀ ಆದಿ ಶಂಕರಾಚಾರ್ಯರರ ಕೊಡುಗೆ ಅಪಾರ ಎಂದು ಭೀಮರಾವ್ ಕುಲಕರ್ಣಿ ಹೇಳಿದರು.

ಅವರು ಪಟ್ಟಣದ ನಿಮಿಷಾಂಬಾದೇವಿ ಮುಂಭಾಗದಲ್ಲಿ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದವರಿಂದ ಆಯೋಜಿಸಿದ್ದ ಆದಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು


“ಶಂಕರ ಎಂದರೆ ಮಂಗಳ, ಆನಂದ ಮತ್ತು ಸಂತೋಷದ ಪ್ರತೀಕ. ಧರ್ಮವು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಭಗವಂತನೇ ಶಂಕರಾಚಾರ್ಯರಾಗಿ ಅವತಾರಗೊಂಡು ಸನಾತನ ಧರ್ಮಕ್ಕೆ ಹೊಸ ಚೈತನ್ಯ ನೀಡಿದರು” ಎಂದರು

ಶಂಕರಾಚಾರ್ಯರು ತಮ್ಮ ತಾಯಿಯ ಅನುಮತಿ ಪಡೆದು ಸನ್ಯಾಸ ಸ್ವೀಕರಿಸಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶವ್ಯಾಪಿ ಯಾತ್ರೆ ಕೈಗೊಂಡರು. ದಶೋಪನಿಷತ್ತುಗಳು ಹಾಗೂ ಬ್ರಹ್ಮಸೂತ್ರಗಳಿಗೆ ಭಾಷ್ಯ ರಚಿಸಿ, ವೇದವ್ಯಾಸರ ಆಶೀರ್ವಾದ ಪಡೆದರು. ದೇಶದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ ಧರ್ಮಸ್ಥಾಪನೆಗೆ ಮಹತ್ವದ ಕೊಡುಗೆ ನೀಡಿದರು ಎಂದು ವಿವರಿಸಿದರು.

ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ಅಧ್ಯಕ್ಷ ಘನಶ್ಯಾಮ ಚೌವ್ಹಾಣ್ ಮಾತನಾಡಿ,ಆದಿ ಶಂಕರಾಚಾರ್ಯರು ಸುಮಾರು 8ನೇ ಶತಮಾನ ಅದ್ವೈತ ವೇದಾಂತ ತತ್ವವನ್ನು ಪ್ರತಿಪಾದಿಸಿದ ಮಹಾನ್ ಭಾರತೀಯ ದಾರ್ಶನಿಕ ಮತ್ತು ಹಿಂದೂ ಧರ್ಮದ ಪುನರುತ್ಥಾಪಕರು. ಕೇರಳದ ಕಾಲಡಿಯಲ್ಲಿ ಜನಿಸಿದ ಇವರು, ಕೇವಲ 32 ವರ್ಷಗಳ ಅಲ್ಪಾಯುಷ್ಯದಲ್ಲಿ ದೇಶಾದ್ಯಂತ ಸಂಚರಿಸಿ, 4 ಮಠಗಳನ್ನು ಸ್ಥಾಪಿಸಿ, ಭಗವದ್ಗೀತೆ, ಉಪನಿಷತ್ತು ಮತ್ತು ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದು ಸನಾತನ ಧರ್ಮವನ್ನು ಎತ್ತಿಹಿಡಿದರು ಎಂದು ಹೇಳಿದರು

ರಾಘವೇಂದ್ರ ಚೌವ್ಹಾಣ್ ಮಾತನಾಡಿ ಪರಮೇಶ್ವರನ ಅವತಾರಿಗಳಾದ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಅವಿರತ ಪ್ರಯತ್ನದಿಂದಾಗಿ ಸನಾತನ ಹಿಂದೂ ಧರ್ಮವೂ ಜೀವಂತವಾಗಿರಲು ಸಾಧ್ಯವಾಗಿದೆ. ಜಗದ್ಗುರು ಶಂಕರಾಚಾರ್ಯರ ದೃಷ್ಟಿ ಲೋಕಕಲ್ಯಾಣವಾಗಿತ್ತು ಶ್ರೀ ಗೋವಿಂದ ಭಗವತ್ಪಾದರಿಂದ ಅನುಗ್ರಹಿತರಾಗಿ ಅವರ ಆದೇಶದಂತೆ ಪ್ರಸ್ತಾನತ್ರಯಗಳಿಗೆ ಭಾಷ್ಯವನ್ನು ಬರೆದರು. ಭಾರತದ ನಾಲ್ಕು ದಿಕ್ಕುಗಳಲ್ಲಿ ಸಂಚರಿಸಿ ಉತ್ತರದಲ್ಲಿ ಬದರಿ ಪಶ್ಚಿಮದಲ್ಲಿ ದ್ವಾರಕಿ ಪೂರ್ವದಲ್ಲಿ ಪುರಿ ಹಾಗೂ ದಕ್ಷಿಣದಲ್ಲಿ ಶೃಂಗೇರಿ ಹೀಗೆ ನಾಲ್ಕು ಪೀಠಗಳನ್ನು ಸ್ಥಾಪಿಸಿದರು. ಅವರು ಸನಾತನ ಹಿಂದೂ ಧರ್ಮದ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.

ಈ ಸಮಯದಲ್ಲಿ ಪುರಸಭೆ ಮಾಜಿ ಸದಸ್ಯ ಮುದಕಪ್ಪ ಬಡಿಗೇರ, ಗಣಪತಿ ಚೌವಾಣ, ರಮೇಶ ಚೌವ್ಹಾಣ, ದೊಂಡಿರಾಮ ಮಿರಜಕರ, ಸಚಿನ್ ಭೂಸಾರೆ, ಶಂಕರ ಉಬಾಳೆ, ಗೋವಿಂದ ಚೌದ್ರಿ, ರಾಘವೇಂದ್ರ ಮಿರಜಕರ್, ಕಾಶಿನಾಥ ಚಿತಾಪೂರ, ನಾಗೇಶ ಚೌವ್ಹಾಣ, ತುಳಸಿರಾಮ ಚೌವ್ಹಾಣ, ಅಶೋಕ ಶೆಟ್ಟಿ, ಮಹೇಶ ಕರ್ಜಗಾರ, ಸಂದೀಪ್ ಚೌವ್ಹಾಣ, ಆಕಾಶ ಪಿಂಪಳೆ, ಪ್ರದೀಪ ಭೂಸಾರೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!