ಜಾತಿ-ಮತಗಳ ಬೇಲಿ ದಾಟಿ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಾಮರಸ್ಯ ಸಾರುವ ಸಾಮೂಹಿಕ ವಿವಾಹಗಳು

ವಿಜಯ ಸಿಂಧೂರ ಗದಗ

ಸಾಮೂಹಿಕ ವಿವಾಹಗಳು ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ, ಜಾತಿ-ಮತಗಳ ಬೇಲಿ ದಾಟಿ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಾಮರಸ್ಯವನ್ನು ಮೂಡಿಸುವ ಪ್ರಮುಖ ವೇದಿಕೆಗಳಾಗಿವೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಅವರು ಶನಿವಾರ ರೋಣ ಮತಕ್ಷೇತ್ರದ ವ್ಯಾಪ್ತಿಯ ಹರ್ಲಾಪೂರ ಗ್ರಾಮದ ಶ್ರೀ ರಾಮಕರುಣಾನಂದ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಸರ್ವ ಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ದುಂದುವೆಚ್ಚವನ್ನು ತಡೆದು, ಸರಳತೆ ಮತ್ತು ಸಮಾನತೆಯನ್ನು ಉತ್ತೇಜಿಸುವ ಈ ಕಾರ್ಯಕ್ರಮಗಳು ಸಾಮಾಜಿಕ ಒಗ್ಗಟ್ಟಿನ ಸಂಕೇತವಾಗಿವೆ.ಸಾಮೂಹಿಕ ವಿವಾಹಗಳ ಪ್ರಮುಖ ಸಾಮರಸ್ಯದ ಅಂಶಗಳು ಸೌಹಾರ್ದತೆ ಮತ್ತು ಏಕತೆ ಎಲ್ಲಾ ಸಮುದಾಯದವರು ಒಂದೆಡೆ ಸೇರಿ ಆಚರಿಸುವುದರಿಂದ ಸಮಾಜದಲ್ಲಿ ಸಾಮರಸ್ಯ, ಸಹಕಾರ ಮತ್ತು ಸಹಬಾಳ್ವೆ ಹೆಚ್ಚುತ್ತದೆ ಎಂದರು.

ಆರ್ಥಿಕ ಹೊರೆ ಕಡಿಮೆಯಾಗಿ, ಬಡ ಕುಟುಂಬಗಳಿಗೆ ಮದುವೆಯ ಸಾಲದ ಹೊರೆಯಿಂದ ಮುಕ್ತಿ ನೀಡಿ, ಆರ್ಥಿಕವಾಗಿ ಬೆನ್ನೆಲುಬಾಗಿ ನಿಲ್ಲುತ್ತವೆ. ಜಾತಿ ಮತ್ತು ಧರ್ಮದ ಭೇದವಿಲ್ಲದೆ, ನೂರಾರು ಜೋಡಿಗಳು ಒಂದೇ ವೇದಿಕೆಯಲ್ಲಿ ಸತಿ-ಪತಿಗಳಾಗುವ ಮೂಲಕ ಸಮಾನತೆಯನ್ನು ಸಾರುತ್ತವೆ ಎಂದರು

ಮದುವೆಗಳಲ್ಲಿ ನಡೆಯುವ ಅನಗತ್ಯ ದುಂದುವೆಚ್ಚವನ್ನು ಆಡಂಬರ ತಡೆದು, ಸರಳತೆಯನ್ನು ಪ್ರೋತ್ಸಾಹಿಸುತ್ತವೆ.
ಸಮಾಜದ ಆಶೀರ್ವಾದ, ಸ್ಥಳೀಯ ಪ್ರಮುಖರು, ಸ್ವಾಮೀಜಿಗಳು ಮತ್ತು ಗ್ರಾಮಸ್ಥರು ಪಾಲ್ಗೊಳ್ಳುವುದರಿಂದ, ಈ ವಿವಾಹಗಳಿಗೆ ಹೆಚ್ಚಿನ ಸಾಮಾಜಿಕ ಮಾನ್ಯತೆ ಮತ್ತು ಆಶೀರ್ವಾದ ದೊರೆಯುತ್ತದೆ ಎಂದರು.

ಈ ರೀತಿಯ ಕಾರ್ಯಕ್ರಮಗಳು ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಬಡವರ ಪಾಲಿಗೆ ವರದಾನವಾಗಿವೆ ಎಂದು ಹೇಳಿದರು

ಕಾರ್ಯಕ್ರಮದ ಶ್ರೀ ಗುರು ರಾಮಕರುಣಾನಂದ ಸ್ವಾಮಿಗಳು ಮಾತನಾಡಿ,ಇಂದಿನ ದುಬಾರಿ ಕಾಲದಲ್ಲಿ ಮದುವೆ ಮಾಡುವುದೆಂದೆರೆ ಕಷ್ಟದ ಕೆಲಸ. ಸಾಲ ಮಾಡಿ ಮದುವೆ ಮಾಡುವುದಕ್ಕಿಂತ ಸಾಲವಿಲ್ಲದೆ ಸರಳ ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡಿಕೊಳ್ಳುವುದು ಒಳ್ಳೆಯ ಕೆಲಸ. ಸಾಮೂಹಿಕ ಮದುವೆಗಳು ಹಣ ಉಳಿತಾಯದ ಜೊತೆಗೆ ಸಮಾಜದಲ್ಲಿ ಸಾಮಾರಸ್ಯದ ಪ್ರತೀಕವಾಗಿವೆ ಎಂದರು

ದುಬಾರಿ ಕಾಲದಲ್ಲಿ ಮನೆ ಕಟ್ಟುವುದು, ಮದುವೆ ಮಾಡುವುದು ಬಹಳ ಕಷ್ಟ. ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮದುವೆ ಸಾಲದ ಬಾಧೆಯಿಂದ ಎಷ್ಟೋ ಕುಟುಂಬಗಳು ವಿಘಟಿತವಾಗುತ್ತಿವೆ. ಇದನ್ನು ಮನಗಂಡು ದೇವಸ್ಥಾನ ಸಮಿತಿಯವರು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು

ತಾ.ಪಂ ಮಾಜಿ ಅಧ್ಯಕ್ಷ ಕ್ರಷ್ಣಗೌಡ ಪಾಟೀಲ ಮಾತನಾಡಿ, ದೇವರ ಸಾನ್ನಿಧ್ಯದಲ್ಲಿ ಗುರುಹಿರಿಯರ, ಮಠಾದೀಶರಿಂದ ಆಶೀರ್ವಾದ ಪಡೆದ ನೀವು ಧನ್ಯರು. ನಿಮ್ಮ ನವದಾಂಪತ್ಯ ಜೀವನ ಸುಖಕರವಾಗಲಿ. ಸೌಂಸಾರದಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಜೀವನದಲ್ಲಿ ದುಡುಕು, ಕೋಪ ನಿಮ್ಮ ಬದುಕನ್ನು ಹಾಳುಮಾಡುತ್ತದೆ. ಇದರಿಂದ ಎಚ್ಚರವಿರಬೇಕು. ಅತ್ತೆ ಮಾವಂದಿರನ್ನು ಗೌರವದಿಂದ ಕಾಣಬೇಕು. ಸೊಸೆಯಂದಿರನ್ನು ನಿಮ್ಮ ಮಗಳೆಂದು ಭಾವಿಸಿ ಪರಸ್ಪರರು ಅನ್ಯೋನ್ಯತೆಯಿಂದ ಬದುಕು ಸುಂದರ ಮಾಡಿಕೊಳ್ಳಿ ಎಂದು ನವದಂಪತಿಗಳಿಗೂ ಹಾಗೂ ಪಾಲಕರಿಗೂ ಕಿವಿಮಾತು ಹೇಳಿದರು.

ಪ.ಪೂ ಮುತ್ತಪ್ಪಜ್ಜನವರು ಮೌನ ಚಿದಾನಂದಮಠ ಹರ್ಲಾಪೂರ ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ,ದೇಶದಲ್ಲಿ ಜನಸಂಖ್ಯೆ ನಾಗಾ ಲೋಟದಲ್ಲಿ ಬೆಳೆಯುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನವದಂಪತಿಗಳು ಮಿತ ಸಂತಾನಕ್ಕೆ ಆದ್ಯತೆ ನೀಡಬೇಕು. ಇದು ನಿಮ್ಮ ಸುಖ ಸಂಸಾರಕ್ಕೂ ಕಾರಣವಾಗುತ್ತದೆ ಎಂದು ಸಲಹೆ ನೀಡಿದರು.

ವಸಂತಗೌಡ ಎಸ್. ಪಾಟೀಲ ರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಶ್ರೀಮತಿ ಲಲಿತಾಬಾಯಿ ಹಂಡೆ ಸೋಲ್ಲಾಪೂರ, ಶ್ರೀಮತಿ ಸುಲೋಚನಾ ಕೋಂ ಶೇಖರಪ್ಪ ಈಟಿ, ಹೂವಿನಹಡಗಲಿ ಮಾತೃಶ್ರೀ ಗುರುರಾಜ ಮರಿಯಪ್ಪ ಸೊಪ್ಪಿನ ಡಾವಣಗೇರಿ ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು
ಗ್ರಾಮ ಪಂಚಾಯತ ಹರ್ಲಾಪೂರ
ಮತ್ತು ಹರ್ಲಾಪೂರ ಗ್ರಾಮದ ಸಮಸ್ತ ಗುರು-ಹಿರಿಯರು ಇದ್ದರು

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!