ಮತಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಬದ್ದ : ಶಾಸಕ ರಾಜುಗೌಡ ಪಾಟೀಲ

ವಿಜಯ ಸಿಂಧೂರ ತಾಳಿಕೋಟೆ

ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದ ತಾಳಿಕೋಟೆ ತಾಲೂಕಿನ ಚಬನೂರ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರವೇ ಮುಖ್ಯ ಕಾರಣವಾಗಿದೆ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ (ಕು. ಸಾಲವಾಡಗಿ) ಹೇಳಿದರು.

ಶನಿವಾರ ಮತಕ್ಷೇತ್ರದ ಚಬನೂರ ಗ್ರಾಮದಲ್ಲಿ ಜಿ.ಪಂ. ವಿಜಯಪುರ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ವಿಜಯಪುರ ವತಿಯಿಂದ 2025–26ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ಯೋಜನೆ ಅಡಿಯಲ್ಲಿ ರೂ. 10.55 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಅಂಗನವಾಡಿ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಚಬನೂರ ಗ್ರಾಮವನ್ನು ಇಡೀ ಮತಕ್ಷೇತ್ರದಲ್ಲಿಯೇ ಹೈಟೆಕ್ ಮಾದರಿ ಗ್ರಾಮವಾಗಿ ರೂಪಿಸಲಾಗುವುದು. ಈ ಅನುದಾನದಲ್ಲಿ ಸಿಸಿ ರಸ್ತೆ, ಚರಂಡಿ ವ್ಯವಸ್ಥೆ, ಹೈಟೆಕ್ ಶೌಚಾಲಯ, ಬಸ್ ನಿಲ್ದಾಣ ಹಾಗೂ ಹೈ ಮಾಸ್ಕ್ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ಕಾಮಗಾರಿಗಳು ಗುಣಮಟ್ಟದೊಂದಿಗೆ ನಡೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು

ಇಷ್ಟೊಂದು ದೊಡ್ಡ ಮೊತ್ತದ ಅನುದಾನವನ್ನು ತರಲು ಗ್ರಾಮದ ಮುಖಂಡ ರುದ್ರಗೌಡ ಪಾಟೀಲ ಅವರು ಮಾಡಿದ ಶ್ರಮ ಶ್ಲಾಘನೀಯವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಯಾರು ಸಹಕರಿಸಿದರೂ ಅವರನ್ನು ಸ್ವಾಗತಿಸುತ್ತೇನೆ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದರು.

ಚಬನೂರ ಗ್ರಾಮವು ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮುಂದೆಯೂ ಇದೇ ರೀತಿಯ ಸಹಕಾರ ಮುಂದುವರಿಯಲಿ. ನಿಮ್ಮ ಋಣ ತೀರಿಸುವಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಬನೂರ ಶ್ರೀ ರಾಮಲಿಂಗೇಶ್ವರ ಮಠದ ಪೂಜ್ಯ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳು, ಗ್ರಾಮದ ಅಭಿವೃದ್ಧಿಗಾಗಿ ಮುಖಂಡ ರುದ್ರಗೌಡ ಪಾಟೀಲ ಅವರು ಶಾಸಕ ರಾಜುಗೌಡರೊಂದಿಗೆ ಕೈಜೋಡಿಸಿ ಅನುದಾನ ತಂದು ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ ಎಂದರು.

ಸಾಸನೂರ ಗ್ರಾಮ ಪಂಚಾಯತಿ ಪಿಡಿಒ ಕಸನಕ್ಕಿ ಅವರ ಕಾರ್ಯಕ್ಷಮತೆಯನ್ನು ಪ್ರಶಂಸಿಸಿ, ಅವರಿಗೆ ಎಲ್ಲರ ಸಹಕಾರ ಇರಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಅನಸೂಯಾ ಚಲವಾದಿ, ಎಇಇ ಆನಂದ ಸ್ವಾಮಿ, ವಿಲಾಸ್ ರಾಠೋಡ, ಮುಖಂಡರಾದ ರುದ್ರಗೌಡ ಪಾಟೀಲ, ಸಂಗನಗೌಡ ಪಾಟೀಲ, ಮಡು ಸೌಕಾರ ಬಿರಾದಾರ, ಮಲ್ಲನಗೌಡ ಬಿರಾದಾರ, ಸಿದ್ದು ಹಿರೇಕುರಬರ, ಯಮನೂರಿ ಒಡೆಯರ್, ಆದಿಲಶಾಹಿ ಕಡಕೋಳ, ತಿಪ್ಪಣ್ಣ ಹಿರೇಕುರಬರ, ರಾಮನಗೌಡ ಚೌದರಿ, ಸಿದ್ದು ಸಿಂಧನಕೇರಿ, ಸಿದ್ದರಾಯ ಹಿರೇಕುರಬರ, ಪ್ರಕಾಶ ಪಡಶೆಟ್ಟಿ, ಸಿದ್ದು ಅವಟಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!