ವಿಜಯ ಸಿಂಧೂರ ನ್ಯೂಸ್
ಗಜೇಂದ್ರಗಡ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ರಾಜ್ಯದ ವಿವಿದ ಜಿಲ್ಲೆ ಹಾಗೂ ತಾಲೂಕುಗಳ ಮಹಾಸಭಾದ ಘಟಕಗಳ ಚುನಾವಣೆಯನ್ನು ತಾಂತ್ರಿಕ ಕಾರಣಗಳಿಂದ ಮುಂದೂಡಿದ್ದ ಚುನಾವಣೆ ಜರುಗಿಸಲು ಮಹಾಸಭಾದ ರಾಜ್ಯ ಅಧ್ಯಕ್ಷರಾದ ಶಂಕರ ಬಿದರಿ ಅವರು ವೇಳಾಪಟ್ಟಿಯನ್ನು ಪ್ರಕಟಿಸಿದ ಪ್ರಕಾರ ಮೇ. ೨೪ ರಂದು ಗಜೇಂದ್ರಗಡ ಹಾಗೂ ನರಗುಂದ ತಾಲೂಕುಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ ಎಂದು ಮಹಾಸಭಾದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ತಿಳಿಸಿದರು.

ಅವರು ಗಜೇಂದ್ರಗಡದ ಪ್ರವಾಸಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಗದಗ ಜಿಲ್ಲಾ ಘಟಕದ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತಾನಾಡಿದರು.
ಜಿಲ್ಲೆಯ ಗಜೇಂದ್ರಗಡ ಹಾಗೂ ನರಗುಂದ ತಾಲೂಕು ಘಟಕಗಳಿಗೆ ಚುನಾವಣೆ ಜರುಗಬೇಕಿದೆ. ಮಹಾಸಭಾಕ್ಕೆ ಆಜೀವ ಸದಸ್ಯರಾಗಲು ಎಪ್ರೀಲ್ ೪ ಕೊನೆಯ ದಿನಾಂಕ ಆಗಿತ್ತು ಎಪ್ರೀಲ್ ೧೫ ರಂದು ಮತದಾರರ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿ ಎಪ್ರಿಲ್ ೨೩ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು ಗಜೇಂದ್ರಗಡದಲ್ಲಿ ಒಟ್ಟು 735 ಮತದಾರರು ಇದ್ದಾರೆ.
ಚುನಾವಣೆಗೆ ಎಪ್ರಿಲ್ ೨೯ ರಂದು ಬುಧವಾರ ಮುಂಜಾನೆ ೧೦-೩೦ ಗಂಟೆಯಿಂದ ನಾಮಪತ್ರ ಸ್ವೀಕರಿಸಲಾಗುವದು. ನಾಮಪತ್ರ ಸ್ವೀಕರಿಸುವ ಕೊನೆಯ ದಿನ ಮೇ. ೬ ಬುಧವಾರ ಮಧ್ಯಾನ್ಹ ೩ ಗಂಟೆಯವರೆಗೆ, ಮೇ. ೭ ರಂದು ಗುರುವಾರ ನಾಮಪತ್ರ ಪರಿಶೀಲಿಸಲಾಗುವದು. ಮೇ. ೧೦ ರವಿವಾರ ಮಧ್ಯಾನ್ಹ ೩ ಗಂಟೆಯವರೆಗೆ ನಾಮಪತ್ರ ಹಿಂದೆ ಪಡೆಯುವ ಕೊನೆಯ ದಿನವಾಗಿದೆ.
ಮೇ. ೨೪ ರಂದು ರವಿವಾರ ಮುಂಜಾನೆ ೮ ರಿಂದ ಸಂಜೆ ೪ ಗಂಟೆಯವರೆಗೆ ಮತದಾನ ಜರುಗಲಿದೆ.
ಮತದಾನದ ನಂತರ ಅದೇ ದಿನ ಮತಗಳ ಎಣಿಕೆ ನಡೆಯಲಿದೆ. ಗಜೇಂದ್ರಗಡ ತಾಲೂಕಿನ ಚುನಾವಣಾಧಿಕಾರಿಯನ್ನಾಗಿ ಗಜೇಂದ್ರಗಡದ ಶ್ರೀ ಬಸವರಾಜ ವೀರಭದ್ರಪ್ಪ ಮುನವಳ್ಳಿ ಅವರನ್ನು ನೇಮಕ ಮಾಡಿದ್ದು ಶ್ರೀ ಸಂಗನಬಸಪ್ಪ ಎಸ್.ವಾಲಿ, ಶ್ರೀ ಮಹಾಂತಪ್ಪ ವೀರಪ್ಪ ಅರಳಿ, ಶ್ರೀ ಕಳಕಪ್ಪ ಸಂಗಟಿ, ಶ್ರೀ ಭೀಮಪ್ಪ ಬಿ. ಗುರಿಕಾರ ಅವರು ಚುನಾವಣಾ ಸಿಬ್ಬಂದಿಯಾಗಿ ಅವರಿಗೆ ಸಾಥ್ ನೀಡಲಿದ್ದಾರೆ. ಚುನಾವಣೆಯನ್ನು ಮಹಾಸಭಾದ ಪ್ರಕಟಿಸಿರುವ ಚುನಾವಣೆ ಕಾನೂನು ನಿಮಯಗಳ ಅನುಸಾರ ಶಾಂತ ರೀತಿಯಿಂದ ಜರುಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶರಣಬಸಪ್ಪ ಗುಡಿಮನಿ ಹೇಳಿದರು.
ಚುನಾವಣಾ ಅಧಿಕಾರಿ ಬಸವರಾಜ ಮುನವಳ್ಳಿ ಮಾತನಾಡಿ, ಏ. 29 ರಿಂದ ಚುನಾವಣಾ ಪ್ರಕ್ರಿಯೆಗಳು ಪಟ್ಟಣದ ಮಧ್ಯಭಾಗದಲ್ಲಿರುವ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಚೇರಿಯಲ್ಲಿ ಜರುಗಿಸಲಾಗುವುದು. ಮೇ. 24 ರಂದು ಪಟ್ಟಣದ ಮೈಸೂರು ಮಠದಲ್ಲಿರುವ ಶ್ರೀ ಗುರು ಮಹಾಂತೇಶ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಜರುಗಲಿದೆ. ಚುನಾವಣೆಗೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಒಟ್ಟು 21 ಸ್ಥಾನಗಳಿರುತ್ತವೆ. ಅದರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಿರುತ್ತವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ಡಿ, ಖಜಾಂಚಿ ಚನ್ನವೀರಪ್ಪ ಹುಣಶಿಕಟ್ಟಿ, ಗಣ್ಯರಾದ ಉಮೇಶ ಹೂಗಾರ ಸೇರಿದಂತೆ ಇತರರು ಇದ್ದರು.
