ಗ್ರಾಮಗಳ ಮೂಲ ಸೌಕರ್ಯಕ್ಕೆ ಆದ್ಯತೆ: ಶಾಸಕ ರಾಜುಗೌಡ ಪಾಟೀಲ.

ವಿಜಯ ಸಿಂಧೂರ ತಾಳಿಕೋಟೆ

ದೇವರ ಹಿಪ್ಪರಗಿ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರು, ಸುಸಜ್ಜಿತ ರಸ್ತೆ, ವಿದ್ಯುತ್, ಶಿಕ್ಷಣ ಹಾಗೂ ಆರೋಗ್ಯದಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ರಾಜುಗೌಡ ಪಾಟೀಲ (ಕು. ಸಾಲವಾಡಗಿ) ಹೇಳಿದರು.

ತಾಲೂಕಿನ ಹೊಸಹಳ್ಳಿ, ಗೊಟಖಂಡಕಿ, ಶಳ್ಳಗಿ ಹಾಗೂ ಮೈಲೇಶ್ವರ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಮೈಲೇಶ್ವರ ಗ್ರಾಮದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು

“ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಆಡಳಿತದಲ್ಲಿಲ್ಲ. ನಾನು ವಿರೋಧ ಪಕ್ಷದ ಶಾಸಕನಾಗಿರುವುದರಿಂದ ಅನುದಾನಕ್ಕೆ ತೀವ್ರ ತೊಂದರೆಗಳಿವೆ. ಆದರೂ ಸಹ ಶಕ್ತಿ ಮೀರಿ ಪ್ರಯತ್ನಿಸಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ” ಎಂದರು.

ಹೊಸಹಳ್ಳಿ ಗ್ರಾಮದಲ್ಲಿ ರೂ.52 ಲಕ್ಷ ಮೊತ್ತದ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿ, ಗೊಟಖಂಡಕಿ ಗ್ರಾಮದಲ್ಲಿ ರೂ.50 ಲಕ್ಷದ ಸಿಸಿ ರಸ್ತೆ ಹಾಗೂ ರೂ.5 ಲಕ್ಷದ ಹಣಮಮ್ಮ ದೇವಸ್ಥಾನ ಹತ್ತಿರ ಸಮುದಾಯ ಭವನ, ಶಳ್ಳಗಿ ಗ್ರಾಮದಲ್ಲಿ ರೂ.20 ಲಕ್ಷದ ಡಾ. ಅಂಬೇಡ್ಕರ ಸಮುದಾಯ ಭವನ, ಮೈಲೇಶ್ವರ ಗ್ರಾಮದಲ್ಲಿ ರೂ.50 ಲಕ್ಷದ ಸಿಸಿ ರಸ್ತೆ ಹಾಗೂ ರೂ.18 ಲಕ್ಷದ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.

“ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧಿಸಲು ಗ್ರಾಮಗಳ ಅಭಿವೃದ್ಧಿ ಮುಖ್ಯ. ಈ ದಿಶೆಯಲ್ಲಿ ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದೇನೆ. ಇದಕ್ಕೆ ಕ್ಷೇತ್ರದ ಜನರ ಸಹಕಾರವೇ ಪ್ರಮುಖ ಕಾರಣ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ಮತ್ತು ವಿಶ್ವಾಸ ಇರಲಿ” ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಮಡುಸೌಕಾರ ಬಿರಾದಾರ, ಮುಖಂಡರಾದ ಎಂ.ಎಂ.ಪೋಲಿಸ್ ಪಾಟೀಲ, ವಿಶ್ವನಾಥ ರೆಡ್ಡಿ ನಾಡಗೌಡ, ಪಂಚಾಕ್ಷರಿ ಹಿರೇಮಠ, ಪ್ರಭುಗೌಡ ನಾಡಗೌಡ, ರಾಜುಗೌಡ ಕೋಳೂರ, ಶಂಕರಗೌಡ ದೇಸಾಯಿ, ಕಾಶೀರಾಯ ದೇಸಾಯಿ, ಸಿದ್ದರಾಮಪ್ಪ ಚೌದ್ರಿ, ಉಮೇಶ ಬೂದಿಹಾಳ, ಶಿವಲಿಂಗಪ್ಪ ಕುಳಗೇರಿ, ಬಸವರಾಜ ಶಳ್ಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜೊತೆಗೆ ಎಇಇ ಆರ್.ಎಸ್. ಹಿರೇಗೌಡರ, ಪಿಡಿಒಗಳಾದ ಪ್ರಭು ಚನ್ನೂರ, ಬಸನಗೌಡ ಚೌದ್ರಿ ಹಾಗೂ ಗುತ್ತಿಗೆದಾರ ಅನಿಲ ರಾಥೋಡ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!