ವಿಜಯ ಸಿಂಧೂರ ರೋಣ
ರೋಣ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿರುವ ಶಾಸಕ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಜಿ.ಎಸ್.ಪಾಟೀಲರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಮಂಗಳವಾರ 101 ಈಡುಗಾಯಿ ಒಡೆದು, ಶ್ರೀ ವೀರಭದ್ರೇಶ್ವರ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ,ಪೊತರಾಜನ ಕಟ್ಟೆಯ ವರೆಗೆ ಉರುಳು ಸೇವೆ ಸಲ್ಲಿಸಿದರು

ಯುವ ಕಾಂಗ್ರೆಸ್ ಅಧ್ಯಕ್ಷ ಮುತ್ತುರಾಜ ನವಲಗುಂದ ಮಾತನಾಡಿ, ರೋಣ ವಿಧಾನಸಭಾ ಇತಿಹಾಸದಲ್ಲಿ ಸುಮಾರು ಐದು ದಶಕಗಳಿಂದ ಜನ ಸೇವೆಗೆ ಜೀವವನ್ನು ಮುಡುಪಾಗಿಟ್ಟ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದ ಅಪರೂಪದ ರಾಜಕಾರಣಿ ಸಾವಿರ ಕೆರೆಗಳ ಸರದಾರ.ನಾಲ್ಕನೆ ಬಾರಿ ಶಾಸಕರಾಗಿ ಆಯ್ಕೆಯಾಗಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ’ ಎಂದರು.
ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಶಾಸಕ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಿದರೆ ಮತಕ್ಷೇತ್ರದ ಎಲ್ಲಾ ಸಮುದಾಯಕ್ಕೂ ನ್ಯಾಯ ನೀಡಿದಂತಾಗುತ್ತದೆ. ಹೀಗಾಗಿ ಹಿಂದುಳಿದಿರುವ ರೋಣ ಮತಕ್ಷೇತ್ರದ ಜನಪ್ರಿಯ ನಾಯಕನಿಗೆ ಸಚಿವ ಸ್ಥಾನವನ್ನು ನೀಡಲು ಮಲ್ಲಿಕಾರ್ಜುನ ಖರ್ಗೆ, ನೂತನ ಮುಖ್ಯಮಂತ್ರಿ ಡಿಕೆಶಿ,
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಗತ್ಯ ಕ್ರಮಕೈಗೊಳ್ಳಬೇಕಿದೆ’ ಎಂದು ಮನವಿ ಮಾಡಿದರು.

ಪುರಸಭೆ ಮಾಜಿ ಉಪಾಧ್ಯಕ್ಷ ದುರುಗಪ್ಪ ಹಿರೇಮನಿ ಮಾತನಾಡಿ, ಈಗಾಗಲೇ ಹಲವು ಬಾರಿ ಶಾಸಕ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಲು ಮನವಿ ಪತ್ರ ಬರೆದು ಕಳುಹಿಸಿದ್ದೇವೆ. ಜಿಲ್ಲೆಯಲ್ಲೇ ರೋಣ ಕ್ಷೇತ್ರವನ್ನು ಮಾದರಿಯಾಗಿಸುವ ಭರವಸೆ ನೀಡಿರುವ ಜಿ.ಎಸ್.ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆಯು ಸಮಗ್ರ ಅಭಿವೃದ್ಧಿಯಾಗಲಿದೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಜಿ. ಎಸ್. ಪಾಟೀಲ ಅವರು ಸಚಿವ ಸ್ಥಾನವನ್ನು ಅಲಂಕರಿಸಿ ಜಿಲ್ಲೆಯ ಹಾಗೂ ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ವಿವಿಧ ಸಮುದಾಯಗಳ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಕಾರ್ಯಕ್ರಮವು ಧಾರ್ಮಿಕ ಸೌಹಾರ್ದತೆ ಮತ್ತು ಜನಪರ ಆಶಯಗಳ ಸಂಕೇತವಾಗಿ ಯಶಸ್ವಿಯಾಗಿ ನಡೆಯಿತು.
