ಬಡವರ ಅನ್ನಭಾಗ್ಯ ಯೋಜನೆಯ ಅನ್ನಕ್ಕೆ ಕನ್ನ ಹಾಕಿದ ಖದೀಮರು

ರೋಣ: ಬಡವರ ಹೊಟ್ಟೆ ತುಂಬಿಸಬೇಕಾದ ಸರ್ಕಾರದ ಪಡಿತರ ಅಕ್ಕಿಯನ್ನೇ ಹಣ ಮಾಡುವ ದಂಧೆಗೆ ಬಳಸಲು ಯತ್ನಿಸಿದ್ದ ಅಕ್ರಮ ಜಾಲವನ್ನು ರೋಣದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಮಧ್ಯರಾತ್ರಿ ಭೇದಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ನಡೆದ ದಾಳಿಯಲ್ಲಿ ಭಾರಿ ಪ್ರಮಾಣದ ಪಿಡಿಎಸ್‌ ಅಕ್ಕಿ ಜಪ್ತಿಯಾಗಿದ್ದು, ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.ಜೂನ್ 1ರಂದು ರಾತ್ರಿ ಆಹಾರ ನಿರೀಕ್ಷಕಿ ಸುವರ್ಣಾ ಮುಕ್ಕಣ್ಣ ಜಮ್ಮನಕಟ್ಟಿ ನೇತೃತ್ವದ ಅಧಿಕಾರಿಗಳ ತಂಡ ರೋಣ ಪಟ್ಟಣದ ಶಿವಾನಂದನಗರದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿತು. ದಾಳಿ ವೇಳೆ ಮನೆಯಲ್ಲಿ ರಾಶಿರಾಶಿಯಾಗಿ ಸಂಗ್ರಹಿಸಲಾಗಿದ್ದ 35 ಚೀಲಗಳಲ್ಲಿನ 14 ಕ್ವಿಂಟಲ್ 40 ಕೆಜಿ ಪಿಡಿಎಸ್‌ ಅಕ್ಕಿ ಪತ್ತೆಯಾಗಿ ಅಧಿಕಾರಿಗಳೇ ಬೆಚ್ಚಿಬಿದ್ದರು.

ಪರಿಶೀಲನೆ ನಡೆಸಿದಾಗ, ಜಪ್ತಿಯಾದ ಅಕ್ಕಿ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ಬಡ ಕುಟುಂಬಗಳಿಗೆ ವಿತರಿಸಬೇಕಾದ ಅಕ್ಕಿಯೇ ಆಗಿರುವುದು ಬಹಿರಂಗವಾಗಿದೆ. ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಸಿದ್ಧತೆ ನಡೆದಿತ್ತು ಎಂಬ ಶಂಕೆ ವ್ಯಕ್ತವಾಗಿದೆ.

ದಾಳಿಯ ವೇಳೆ ಮನೆಯೊಳಗೆ ಅಕ್ಕಿ ಚೀಲಗಳು ಗುಡ್ಡದಂತೆ ರಾಶಿಯಾಗಿದ್ದ ದೃಶ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿತು. ಅಧಿಕಾರಿಗಳು ತಕ್ಷಣವೇ ಅಕ್ಕಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಜಪ್ತಿಯಾದ ಅಕ್ಕಿಯ ಮೌಲ್ಯ ಸುಮಾರು ₹31,500 ಎಂದು ಅಂದಾಜಿಸಲಾಗಿದೆ.

ಈ ಪ್ರಕರಣದಲ್ಲಿ ಮೆಹಬೂಬ್ ಭಾಷಾಸಾಬ್ ಮುಲ್ಲಾ ಎಂಬಾತ ಪ್ರಮುಖ ಆರೋಪಿಯಾಗಿದ್ದು, ಬಡವರ ಪಾಲಿನ ಅನ್ನಕ್ಕೆ ಕನ್ನ ಹಾಕಿದ ಆರೋಪ ಎದುರಿಸುತ್ತಿದ್ದಾನೆ. ಆಹಾರ ಇಲಾಖೆ ನೀಡಿದ ದೂರಿನ ಮೇರೆಗೆ ರೋಣ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 99/2026 ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7 ಹಾಗೂ ಪಿಡಿಎಸ್‌ ನಿಯಂತ್ರಣ ಆದೇಶ-1992ರ ಕಲಂ 18 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!