ವಿಜಯ ಸಿಂಧೂರ ತಾಳಿಕೋಟೆ
ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ತಾಳಿಕೋಟೆಯ ರೈತ ಸಂಪರ್ಕ ಕೇಂದ್ರದಲ್ಲಿ 2026-27ನೇ ಸಾಲಿನ ಬೀಜ ವಿತರಣಾ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ರೈತರಿಗೆ ಸರಿಯಾದ ಸಮಯದಲ್ಲಿ ಗುಣಮಟ್ಟದ ಬೀಜ ಒದಗಿಸುವ ಮೂಲಕ ಇಳುವರಿ ಹೆಚ್ಚಿಸುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ತೊಗರಿ ಬೀಜೋಪಚಾರದ ಪ್ರಾತ್ಯಕ್ಷಿಕೆ ನಡೆಯಿತು.
ಬೀಜೋಪಚಾರದಿಂದ ಬೆಳೆಗಳಿಗೆ ಆರಂಭದಲ್ಲೇ ರೋಗ ನಿರೋಧಕ ಶಕ್ತಿ ದೊರೆಯುವುದರಿಂದ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಕೃಷಿ ಅಧಿಕಾರಿಗಳು ವಿವರಿಸಿದರು.
ರೈತರಿಗೆ ತೊಗರಿ ಬೆಳೆಯಲ್ಲಿ ಅಗಲ ಸಾಲು ಬಿತ್ತನೆ, ಅಂತರ ಬೆಳೆ ಪದ್ಧತಿ ಅನುಸರಣೆ, ಬಿತ್ತನೆಯ 45 ದಿನಗಳ ನಂತರ ಕುಡಿ ಚಿವುಟುವಿಕೆ ಮತ್ತು ಪಲ್ಸ್ ಮ್ಯಾಜಿಕ್, ಪಲ್ಸ್ ಬುಸ್ಟರ್ ಬಳಕೆಯಿಂದ ಇಳುವರಿ ಹೆಚ್ಚಳ ಸಾಧ್ಯವೆಂದು ತಾಂತ್ರಿಕ ಮಾಹಿತಿ ನೀಡಲಾಯಿತು. ಈ ವಿಧಾನಗಳನ್ನು ಅನುಸರಿಸಿದರೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಉತ್ಪಾದನೆ ಸಾಧಿಸಬಹುದೆಂದು ತಿಳಿಸಲಾಯಿತು.
ಪ್ರಸ್ತುತ ರೈತ ಸಂಪರ್ಕ ಕೇಂದ್ರದಲ್ಲಿ 114 ಕ್ವಿಂಟಲ್ ತೊಗರಿ, 60 ಕೆಜಿ ಹೆಸರು, 960 ಕೆಜಿ ಮೆಕ್ಕೆಜೋಳ, 150 ಕೆಜಿ ಸೂರ್ಯಕಾಂತಿ ಹಾಗೂ 150 ಕೆಜಿ ಹೈಬ್ರಿಡ್ ಸಜ್ಜೆ ಬೀಜ ಸಂಗ್ರಹಿಸಲಾಗಿದ್ದು, ಬೇಡಿಕೆಯಂತೆ ಹಂತ ಹಂತವಾಗಿ ವಿತರಣೆ ನಡೆಯಲಿದೆ.“ಸರಿಯಾದ ತಂತ್ರಜ್ಞಾನ ಹಾಗೂ ಗುಣಮಟ್ಟದ ಬೀಜ ಬಳಕೆ ಮಾಡಿದರೆ ರೈತರಿಗೆ ಉತ್ತಮ ಆದಾಯ ಸಾಧ್ಯ” ಎಂದು ಕೃಷಿ ಅಧಿಕಾರಿ ಮಹೇಶ ಜೋಶಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬಸನಗೌಡ ಮಾಡಗಿ, ಸಿದ್ದನಗೌಡ ಪಾಟೀಲ ನಾವದಗಿ, ಪ್ರಭುಗೌಡ ಮದರಕಲ್, ರವಿ ಗೌಡ ಪಾಟೀಲ ಸೇರಿದಂತೆ ಹಲವರು ಭಾಗವಹಿಸಿದ್ದರು. ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ಹೋಬಳಿ ವ್ಯಾಪ್ತಿಯ ರೈತರು ಮತ್ತು ಕೃಷಿ ಸಖಿಯರು ಉಪಸ್ಥಿತರಿದ್ದರು.
