ವಿಜಯ ಸಿಂಧೂರ ತಾಳಿಕೋಟೆ
ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ಕನಿಷ್ಠ 10 ಗಂಟೆಗಳವರೆಗೆ ಗುಣಮಟ್ಟದ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ ಮಾತನಾಡಿ, ರೈತರಿಗೆ 10 ಗಂಟೆಗಳ ವಿದ್ಯುತ್ ಪೂರೈಕೆ ಮಾಡುವ ಭರವಸೆ ನೀಡಿದರೂ, ಪ್ರಸ್ತುತ ಕೇವಲ 2 ಗಂಟೆಗಳಷ್ಟೇ ವಿದ್ಯುತ್ ನೀಡಲಾಗುತ್ತಿದೆ. ಅದೂ ಪದೇಪದೇ ಕಡಿತಗೊಳ್ಳುತ್ತಿರುವುದರಿಂದ ರೈತರಿಗೆ ಭಾರೀ ತೊಂದರೆ ಉಂಟಾಗಿದೆ ಎಂದು ಆರೋಪಿಸಿದರು.
ತಾಲೂಕಿನ ಬಮ್ಮನಳ್ಳಿ, ಗುತ್ಯಾಳ, ಬೋಳವಾಟ, ಪತ್ತೇಪೂರ-ಹೊನಳ್ಳಿ, ತುಂಬಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದಿರುವುದು ಬೆಳೆಗಳಿಗೆ ಹಾನಿ ಉಂಟುಮಾಡುತ್ತಿದೆ. ಈ ಬಾರಿ ಬೇಸಿಗೆಯ ಉಷ್ಣತೆ ಹೆಚ್ಚಿರುವುದರಿಂದ ನಿರಂತರ ನೀರಾವರಿ ಅಗತ್ಯವಿದೆ. ಇಲ್ಲದಿದ್ದರೆ ಬೆಳೆಗಳು ಒಣಗಿ ನಾಶವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಬರಗಾಲದಿಂದ ಸಂಕಷ್ಟದಲ್ಲಿರುವ ರೈತರು ಸಾಲದ ಹೊರೆ ತಾಳಲಾರದೆ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರ, ಪವನ ಹಾಗೂ ಸೌರ ವಿದ್ಯುತ್ ಉತ್ಪಾದನೆ ಸಾಕಷ್ಟು ಇದ್ದರೂ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲಾಗುತ್ತಿಲ್ಲ. ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ ನೀಡಲಾಗುತ್ತಿದ್ದು, ರೈತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಸಂಕಷ್ಟವನ್ನು ಮನಗಂಡು ತಕ್ಷಣವೇ ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 10 ಗಂಟೆಗಳವರೆಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕ ಉಪಾಧ್ಯಕ್ಷ:ರಾಮನಗೌಡ ಹಾದಿಮನಿ, ಸಂಗನಗೌಡ ಕೊಳೂರ, ಬಸವರಾಜ ಮಸರಕಲ್ಲ, ಶರಣಪ್ಪ ಕಲಬುರ್ಗಿ, ಭೀಮಣ್ಣ ಕದ್ದೆನಹಳ್ಳಿ, ಸಂಗಪ್ಪ ಕಲಬುರ್ಗಿ, ಶ್ರೀನಿವಾಸ ಗೊತಗುಣಕಿ, ಜಗದೀಶ ದೇಸಾಯಿ, ಶಿವಪುತ್ರಪ್ಪ ಕಟ್ಟಿಮನಿ, ಶಿವಪ್ಪ ಬಡಿಗೇರ, ಪರಶುರಾಮ ದ್ವಾರನಹಳ್ಳಿ, ಶರಣುಬಸು ಬೆಳ್ಳುಬ್ಬಿ, ಸಂಗಪ್ಪ ರಕ್ಕಸಗಿ, ಗುರುರಾಜ ಕಲಬುರ್ಗಿ, ಮಂಜುನಾಥ ಬಡಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
