ವಿಜಯ ಸಿಂಧೂರ ಗದಗ
ಗದಗ: ಕಳೆದ ಒಂದು ವರ್ಷದ ಅವಧಿಯಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ನಡೆದ 14 ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನ ಆರೋಪಿಗಳ ಸಮೇತ 1.26 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಜಿಲ್ಲೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆ ಪೈಕಿ 703 ಗ್ರಾಂ ಬಂಗಾರದ ಆಭರಣಗಳು, 4,337 ಗ್ರಾಂ ಬೆಳ್ಳಿ ಆಭರಣಗಳು ಸೇರಿ ಅಪಾರ ಪ್ರಮಾಣದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಮುಖಕ್ಕೆ ಮಾಸ್ಕ್, ಕೈಗೆ ಹ್ಯಾಂಡ್ ಗೌಸ್ ಬಳಸಿಕೊಂಡು ಯಾವುದೇ ರೀತಿ ಸುಳಿವು ಬಿಡದೆ ರಾತ್ರಿ ವೇಳೆ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕಾದ್ರೋಳಿಯ ಸುರೇಶ ಅಲಿಯಾಸ್ ಸಣ್ಣಸುರೇಶ ಸತ್ಯಪ್ಪ ಸಿಂಗನೂರ, ಧಾರವಾಡ ಜಿಲ್ಲೆಯ ಅಳ್ಳಾವರದ ನಾಗಪ್ಪ ತಿಮ್ಮಪ್ಪ ದುರಗಮುರಗಿ, ಗರಗದ ಶಿವು ಸುಂಕಪ್ಪ ಬೆಳಗಂಟಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ಸುರೇಶ ಅಲಿಯಾಸ್ ದೊಡ್ಡಸುರೇಶ ಬಾಬು ತಮ್ಮಣ್ಣವರ, ಧಾರವಾಡ ಜಿಲ್ಲೆಯ ವೆಂಕಟಾಪೂರದ ಶಂಕರ ಯಾಕೆ ಕುಡ್ಡ ಶಂಕರ ಯಲ್ಲಪ್ಪ ಕರಿ, ಧಾರವಾಡದ ಮಂಜುನಾಥ ನಾಗರಾಜ ಬಾದಗಿ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೆಳಗಾಲಪೇಟೆಯ ಹುಲಗೆಪ್ಪ ಫಕ್ಕೀರಪ್ಪ ಬೆಳಗಾಲಪೇಟೆ, ಧಾರವಾಡ ಜಿಲ್ಲೆಯ ಮುನವಳ್ಳಿಯ ಆನಂದ ದುರಗಪ್ಪ ಯರಗಣ್ಣವರ ಎಂಬ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮೊಬೈಲ್ ಫೋನ್ ಬಳಸದೆ ಚಾಣಾಕ್ಷತನದ ರೀತಿಯಲ್ಲಿ ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ಹೇಗೆ ಬಂದು ಹೇಗೆ ಹೋದರು ಎಂಬುದು ತಿಳಿಯುತ್ತಿರಲಿಲ್ಲ. ಜೊತೆಗೆ ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗುತ್ತಿರಲಿಲ್ಲ. ಇಂತಹ ಚಾಲೆಂಜಿಂಗ್ ಪ್ರಕರಣ ಭೇದಿಸಿದ ಜಿಲ್ಲೆಯ ಪೊಲೀಸರು ವಿಶೇಷ ತಂಡ ರಚಿಸಿ, ಅಂತಾರಾಜ್ಯಗಳನ್ನು ತಿಂಗಳಾನುಗಟ್ಟಲೇ ಶೋಧ ನಡೆಸಿ ಕಳ್ಳತನ ಪ್ರಕರಣ ಬೇಧಿಸಿದ್ದಾರೆ.
ಪ್ರಮುಖ 11 ಪ್ರಕರಣಗಳ ಪೈಕಿ ಗದಗ ಜಿಲ್ಲೆಗೆ ಸಂಬಂಧಿಸಿದಂತೆ 7, ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ 4 ಪ್ರಕರಣಗಳನ್ನು ಭೇದಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮುರ್ತುಜಾ ಖಾದ್ರಿ ನೇತೃತ್ವದಲ್ಲಿ ಸಿಪಿಐ ಧೀರಜ್ ಶಿಂದೆ, ಪಿಎಸ್‌ಐ ಮಾರುತಿ ಜೋಗದಂಡಕರ, ಲಕ್ಷ್ಮಪ್ಪ ಆರಿ ಸೇರಿ ಇತರೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
