ವಿಜಯ ಸಿಂಧೂರ, ತಾಳಿಕೋಟೆ
ಸ್ಥಳೀಯ ಸಜ್ಜನ್ ಗಾಣಿಗರ ಸೇವಾ ಸಂಘದ ವತಿಯಿಂದ ತಾಳಿಕೋಟಿ ಹಾಗೂ ತಾಲೂಕಿನಾದ್ಯಂತ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳಲ್ಲಿ ಶೇಕಡಾ 85ಕ್ಕೂ ಹೆಚ್ಚು ಅಂಕ ಗಳಿಸಿ ಸಮಾಜಕ್ಕೆ ಕೀರ್ತಿ ತಂದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀ ಕಾಶಿನಾಥ್ ಸಜ್ಜನ್ ಅವರು, “ಸಮಾಜದಲ್ಲಿರುವ ಇಂತಹ ಅಪ್ರತಿಮ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ಇಂತಹ ಸನ್ಮಾನಗಳು ವಿದ್ಯಾರ್ಥಿಗಳಲ್ಲಿ ಹೊಸ ಸ್ಫೂರ್ತಿಯನ್ನು ತುಂಬಲಿದ್ದು, ಅವರು ಭವಿಷ್ಯದಲ್ಲಿ ಮತ್ತಷ್ಟು ಉನ್ನತ ಸಾಧನೆಗಳ ಶಿಖರ ಏರಲು ಪ್ರೇರಣೆಯಾಗಲಿವೆ” ಎಂದು ಆಶಿಸಿದರು.
ಮುಖ್ಯ ಉಪನ್ಯಾಸ ನೀಡಿದ ಪ್ರಮುಖ ಸಮಾಜ ಸೇವಕರು ಹಾಗೂ ಶಿಕ್ಷಕರಾದ ಶ್ರೀ ಎಸ್. ಬಿ. ಸಜ್ಜನ್ ಅವರು ಮಾತನಾಡಿ, “ಯಾವುದೇ ಸಮಾಜದ ಪ್ರಗತಿ ಆ ಸಮಾಜದ ಒಗ್ಗಟ್ಟಿನ ಮೇಲೆ ನಿಂತಿರುತ್ತದೆ. ನಾವೆಲ್ಲರೂ ಒಟ್ಟಾಗಿ ಇಂತಹ ಸತ್ಕಾರ್ಯಗಳನ್ನು ಹಮ್ಮಿಕೊಂಡಾಗ ಸಮಾಜದ ಏಳಿಗೆಯ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸವೂ ಸಾಧ್ಯವಾಗುತ್ತದೆ” ಎಂದು ಒಗ್ಗಟ್ಟಿನ ಮಹತ್ವವನ್ನು ಸಾರಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಶರಣಪ್ಪ ಸಜ್ಜನ್ ಆಗಮಿಸಿದ್ದರು. ಅತಿಥಿಗಳಾಗಿ ಶ್ರೀ ಬಸವರಾಜ್ ಜಾಲಿಬೆಂಚಿ ಹಾಗೂ ಶ್ರೀ ಪ್ರಕಾಶ್ ಅ. ಸಜ್ಜನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಸಜ್ಜನ್ ಸಮಾಜದ ಅಧ್ಯಕ್ಷರಾದ ಶ್ರೀ ಪ್ರಕಾಶ್ ಸಜ್ಜನ್ ಹಾಗೂ ಉಪಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಸಜ್ಜನ್ ವಹಿಸಿದ್ದರು ಶ್ರೀಮತಿ ಜಯಶ್ರೀ ಸಜ್ಜನ್ ಅವರ ಸುಮಧುರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕರಾದ ಶ್ರೀ ಎಸ್. ಬಿ. ಸಜ್ಜನ್ ಅವರು ಎಲ್ಲರನ್ನೂ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಶ್ರೀ ಕಾಶಿನಾಥ್ ಸಜ್ಜನ್ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಶ್ರೀ ಬಸವರಾಜ್ ಸಜ್ಜನ್ ಅವರು ವಂದನಾರ್ಪಣೆ ಮಾಡಿದರು.
ಈ ಸಮಾರಂಭದಲ್ಲಿ ತಾಳಿಕೋಟಿ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸಜ್ಜನ್ ಸಮಾಜದ ಹಿರಿಯರು, ಮಹಿಳೆಯರು ಮತ್ತು ಯುವಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
