ವರದಕ್ಷಿಣೆಗೆ ಕಡಿವಾಣ ಹಾಕಿದ ಬಂಜಾರ ಸಮಾಜ

ವಿಜಯ ಸಿಂಧೂರ ಗಜೇಂದ್ರಗಡ

ವರದಕ್ಷಿಣೆ ಎಂಬುದು ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿರುವ ಪಿಡುಗು. ಇದರಿಂದ ಹೆಚ್ಚಾಗಿ ಮಹಿಳೆಯರು, ಹೆಣ್ಣು ಹೆತ್ತವರು ಶೋಷಣೆಗೆ ಒಳಗಾಗುತ್ತಾರೆ. ಇದನ್ನು ನಿಯಂತ್ರಿಸುವುದಕ್ಕಾಗಿ ವರದಕ್ಷಿಣೆ ನಿಷೇಧ ಅಧಿನಿಯಮ ಜಾರಿಗೆ ಬಂತಾದರು ಪಾಲನೆಯಲ್ಲಿ ಇರಲಿಲ್ಲ. ಈಚೆಗೆ ಬಂಗಾರದ ಬೆಲೆ 10 ಗ್ರಾಂಗೆ ₹2 ಲಕ್ಷದ ವರೆಗೆ ತಲುಪಿದಾಗ ಹೆಣ್ಣು ಹೆತ್ತವರು ಮದುವೆ ಮಾಡುವುದು ಹೇಗೆ ಎಂಬ ಆತಂಕಕ್ಕೆ ಒಳಗಾಗಿದ್ದರು. ಆದರೆ ಈ ಪಿಡುಗನ್ನು ನಿಜವಾಗಿಯೂ ನಿವಾರಿಸಿ, ನಿಯಂತ್ರಿಸಲು ಬಂಜಾರ ಸಮಾಜದ ಹಿರಿಯರು ಮುಂದಾಗುವ ಮೂಲಕ ಇತರೇ ಎಲ್ಲಾ ಸಮಾಜದ ಗುರು ಹಿರಿಯರಿಗೆ ಮಾದರಿಯಾಗಿದ್ದಾರೆ.

ಗಜೇಂದ್ರಗಡ ತಾಲ್ಲೂಕಿನ 17 ತಾಂಡಾದ ನಾಯಕ, ಕಾರಬಾರಿ, ಡಾವ್‌, ಗುರುಹಿರಿಯರ ಹಾಗೂ ಯುವಕರ ಸಮ್ಮುಖದಲ್ಲಿ ದಕ್ಷಿಣಕಾಶಿ ಕಾಲಕಾಲೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಕರೆಯಲಾಗಿದ್ದ ಸಭೆಯಲ್ಲಿ ವರದಕ್ಷಿಣೆ ಕೊಡುವುದು, ತೆಗೆದುಕೊಳ್ಳುವುದಕ್ಕೆ ಕಡಿವಾಣ ಹಾಕಲಾಯಿತು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಡೆದ ಸಭೆಯಲ್ಲಿ ಎಲ್ಲಾ ತಾಂಡಾದ ಗುರುಹಿರಿಯರ ಅಭಿಪ್ರಾಯಗಳನ್ನು ಪಡೆದು, ಸಾಧಕ-ಬಾಧಕಗಳನ್ನು ಚರ್ಚಿಸಲಾಯಿತು. ಸಮಾಜದ ಮೇಲೆ, ಬಡ ಕುಟುಂಬಗಳ ಮೇಲೆ, ಮಹಿಳೆಯರ ಮೇಲೆ ಹೆಣ್ಣು ಹೆತ್ತವರ ಮೇಲೆ ದುಷ್ಪರಿಣಾಮ ಬೀರುತ್ತಿದ್ದ ಆಚರಣೆಗಳನ್ನು ನಿಷೇಧಿಸುವ ನಿರ್ಧಾರವನ್ನು ಹಿರಿಯರು ಪ್ರಕಟಿಸಿದ ನಂತರ ಠರಾವು ಪಾಸ್ ಮಾಡಲಾಯಿತು.

ಇಲ್ಲಿ ಕೈಗೊಳ್ಳಲಾದ ಸಮಾಜಮುಖಿ ನಿರ್ಧಾರಗಳೆಂದರೆ, ವರದಕ್ಷಿಣೆಗೆ ಕಡಿವಾಣ, ಮದುವೆಗಾಗಿ ಮಾಡುವ ದುಂದು ವೆಚ್ಚಕ್ಕೆ ತಡೆ, ಮದ್ಯಪಾನ ಸೇವನೆ, ಡಿಜೆಗೆ ಸಂಪೂರ್ಣ ನಿಷೇಧ. ಮದುವೆ ಜವಳಿಗಾಗಿ, ಕಿರಾಣಿಗಾಗಿ ನೂರಾರು ಜನರು ಹೋಗದೆ 21 ಸಂಖ್ಯೆಯೊಳಗೆ ಹೋಗುವುದು. ಯಾವುದೇ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ದುಂದುವೆಚ್ಚದ ಊಟ ಹಾಕಿಸುವಂತಿಲ್ಲ. ಮದುಮಗಳಿಗೆ ಜೀವನೋಪಾಯಕ್ಕೆ ಬೇಕಾದ ಅಗತ್ಯ ಭಾಂಡೆ ಸಾಮಾಗ್ರಿಗಳನ್ನು ಮಾತ್ರ ಹಾಕಬೇಕು. ಹೆಣ್ಣಿನ ಮನೆಯ ಮುಂದೆ ಮದುವೆ ಮಾಡಿದರೆ ಅರ್ಧ-ಅರ್ಧ ಖರ್ಚು ಹಂಚಿಕೆ. ತಾಳಿಯಲ್ಲಿ ಗಂಡು-ಹೆಣ್ಣಿನ ಕಡೆಯವರು ಇಬ್ಬರು ಒಂದೊಂದು ತಾಳಿ ಕೊಡಿಸಬೇಕು, ತಾಳಿಗುಂಡು ಐದು ಗ್ರಾಂ ಒಳಗೆ ಇರಬೇಕು. ಸಂಪ್ರದಾಯದಂತೆ ಬಳೆಗಳನ್ನು ಮಾತ್ರ ಮಹಿಳೆಯರಿಗೆ ಕೊಡಿಸಬೇಕು ಹೀಗೆ ಅನೇಕ ಉಪಯುಕ್ತ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಅಷ್ಟೇ ಅಲ್ಲದೆ, ಹಾಡ್ ಬಕರಾ ಅಂದರೆ ವ್ಯಕ್ತಿಯೊಬ್ಬ ಸಾವನ್ನಪ್ಪಿದಾಗ ಮೂರು ದಿನದ ದಿವಸದಂದು ಮಾಡುವ ಮಾಂಸಹಾರಿ ಊಟನ್ನು ನಿಷೇಧಿಸಲಾಯಿತು. ಯಾವುದೇ ಸಮಾಜದವರು, ಬೀಗರು ಪ್ರಾಣಿಯನ್ನು ಬಲಿ ಕೊಡದೆ, ಕುಟುಂಬಸ್ಥರ ದುಃಖದಲ್ಲಿ ಪಾಲ್ಗೊಂಡು ಸಾಂತ್ವಾನ ಹೇಳುವುದು, ಧೈರ್ಯ ತುಂಬುವುದು ಹಾಗೂ ಸಾಂಪ್ರದಾಯದ ಪದ್ದತಿಯನ್ನು ಮಾತ್ರ ಆಚರಣೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.

17 ತಾಂಡಾದ ಹಿರಿಯರು ಒಪ್ಪಿಗೆ ಸೂಚಿಸಿದ ನಂತರ ಸಾಂಘಿಕವಾಗಿ ನಿರ್ಧಾರವನ್ನು ಪ್ರಕಟಿಸಲಾಯಿತು. ಆ ಬಳಿಕ ಠಾರವು ಬರೆದು ಓದಿಸಲಾಯಿತು. ಇದೇ ನಿಯಮವನ್ನು ದೇಶದ ಯಾವುದೇ ತಾಂಡಾದ ಜೊತೆಗೆ ಸಂಬಂಧ ಬೆಳೆಸಿದರೆ ಪಾಲನೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಒಂದು ವೇಳೆ 17 ತಾಂಡಾ ಹೊರೆತುಪಡಿಸಿ ಇತರೇ ಜಿಲ್ಲೆಯ ತಾಂಡಾದವರು ಹೆಚ್ಚಿನ ವರದಕ್ಷಿಣಿಗೆ, ದುಂದು ವೆಚ್ಚಕ್ಕೆ ಮುಂದಾದರೆ ಹಿರಿಯರು ತಿಳಿಸಿ ಹೇಳಬೇಕು.

ಅವರು ಸಹ ಇಲ್ಲಿ ಕೈಗೊಳ್ಳಲಾದ ನಿರ್ಧಾರವನ್ನು ಪಾಲನೆ ಮಾಡುವಂತೆ ಮನವೊಲಿಸಿ ಸಂಬಂಧಗಳನ್ನು ಬೆಳಿಸಬೇಕು. ವರದಕ್ಷಿಣೆ ಬೇಡಿಕೆ ಹಾಗೂ ಇತರೇ ವಿಷಯಗಳ ಬಗ್ಗೆ ಇಲ್ಲಿ ಕೈಗೊಳ್ಳಲಾದ ನಿರ್ಧಾರವನ್ನು ಯಾರಾದರು ತಿರಸ್ಕರಿಸಿದರೆ ತಾಂಡಾದ ಹಿರಿಯರು ಕೈಗೊಳ್ಳುವ ಕ್ರಮಕ್ಕೆ ಬದ್ದರಾಗಬೇಕು ಎನ್ನುವ ಮಾತಿಗೆ ಎಂದು ಸಮ್ಮತಿ ಸೂಚಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ಈ ವೇಳೆ ಗಜೇಂದ್ರಗಡ ತಾಂಡಾದ ಸುರೇಶ ಸಿ. ರಾಠೋಡ, ಯಮನಪ್ಪ ಎಸ್.‌ ರಾಠೋಡ, ಮನ್ನುನಾಯಕ ಡಿ. ರಾಠೋಡ, ದುರಗಪ್ಪ ಮಾಳೋತ್ತರ, ಶಿವಪುತ್ರಪ್ಪ ಡಿ. ಮಾಳೋತ್ತರ, ಗೋವಿಂದಪ್ಪ ಗುಗಲೊತ್ತರ, ರಾಜೂರ ತಾಂಡಾದ ತುಕ್ಕಪ್ಪ ರಾಠೋಡ, ಪಡಿಯಪ್ಪ ಚವ್ಹಾಣ, ದಿಂಡೂರ ತಾಂಡಾದ ಎಸ್. ಎಸ್. ಲಮಾಣಿ, ಲಕ್ಕಲಕಟ್ಟಿ ತಾಂಡಾದ ಭೀಮಪ್ಪ ನಾಯಕ, ಭೈರಾಪುರ ತಾಂಡಾದ ಲಕ್ಷ್ಮಣ ರಾಠೋಡ, ಜನತಾ ಪ್ಲಾಟ್ ತಾಂಡಾದ ಕೃಷ್ಣಪ್ಪ ರಾಠೋಡ, ನಾರಾಯಣಪ್ಪ ಮಾಳೋತ್ತರ, ನೆಲ್ಲೂರು ತಾಂಡಾದ ಶಾಂತಪ್ಪ ರಾಠೋಡ, ಶರಣಪ್ಪ ಲಮಾಣಿ, ಸರ್ಜಾಪುರ ತಾಂಡಾದ ಮಹಾಂತೇಶ ರಾಠೋಡ, ಚಂದ್ರು ಕಾರಬಾರಿ, ಶಂಕ್ರಪ್ಪ ನಾಯಕ, ಪೋಮಪ್ಪ ಕಾರಬಾರಿ, ರುದ್ರಾಪುರ ತಾಂಡಾದ ಎಂ. ವೈ. ಮಾಳೋತ್ತರ, ತುಕ್ಕಪ್ಪ ರಾಠೋಡ, ನೇಮಪ್ಪ ಮಾಳೋತ್ತರ, ಅಮರಗಟ್ಟಿ ತಾಂಡಾದ ಸಕ್ರಪ್ಪ ರಾಠೋಡ, ಕೊಡಗಾನೂರ ತಾಂಡಾದ ಕಮಲಪ್ಪ ರಾಠೋಡ, ದುರ್ಗಪ್ಪ ಮಾಳೋತ್ತರ, ಬೆಣಚಮಟ್ಟಿ ತಾಂಡಾದ ಪುಂಡಲೀಕ ನಾಯಕ, ಕಾಂತಪ್ಪ ಕಾರಬಾರಿ, ನಾಗರಸಕೊಪ್ಪ ತಾಂಡಾದ ರಾಮಪ್ಪ ರಾಠೋಡ, ಶರಣಪ್ಪ ಮಾಳೋತ್ತರ ಗೌಡಗೇರಿ ತಾಂಡಾದ ಕುಮಾರ ರಾಠೋಡ, ಯಮನಪ್ಪ ಮಾಳೋತ್ತರ ಇತರರು ಇದ್ದರು. ‌

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!