ವಿಜಯ ಸಿಂಧೂರ, ನರಗುಂದ
ಪಟ್ಟಣದ ಶ್ರೀ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾಕೋತ್ತರ ಅಧ್ಯಯನ ಕೇಂದ್ರ ನರಗುಂದ ಹಾಗೂ ರೆಡ್ ಕ್ರಾಸ್ ಘಟಕದ ಅಡಿಯಲ್ಲಿ ಶುಕ್ರವಾರ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥಾಪಕರಾದ ಹೆನ್ರಿ ಡೂನಾಂಟ್ ರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರೊಂದಿಗೆ ಗೌರವ ಸಲ್ಲಿಸಲಾಯಿತು.

ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಡಾ. ರಾಮು ಎಂ ಎಸ್ ರವರು ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಹುಟ್ಟು, ಬೆಳವಣಿಗೆ ಮತ್ತು ಅದರ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ರೆಡ್ ಕ್ರಾಸ್ ಸಂಸ್ಥೆಯು ಅಂತರರಾಷ್ಟ್ರೀಯ ಮಾನವೀಯ ಸೇವಾ ಸಂಸ್ಥೆಯಾಗಿದೆ. ಯುದ್ಧ, ಪ್ರಕೃತಿ ವಿಕೋಪ, ಅಪಘಾತಗಳು ಹಾಗೂ ಆರೋಗ್ಯ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತದೆ.ಈ ಸಂಸ್ಥೆಯನ್ನು ಹೆನ್ರಿ ಡುನಟ್ ಅವರು 1863 ರಲ್ಲಿ ಸ್ಥಾಪಿಸಿದರು. ಸೋಲ್ಫೆರಿನೊ ಯುದ್ಧದ ಸಂದರ್ಭದಲ್ಲಿ ಗಾಯಗೊಂಡ ಸೈನಿಕರ ದುಸ್ಥಿತಿಯನ್ನು ಕಂಡು ಮಾನವೀಯ ಸೇವೆಯ ಅಗತ್ಯವನ್ನು ಅರಿತು ಈ ಚಳವಳಿಯನ್ನು ಆರಂಭಿಸಿದರು ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಮುಖ್ಯ ಉದ್ದೇಶಗಳಾದ ಯುದ್ಧ ಹಾಗೂ ಪ್ರಕೃತಿ ವಿಕೋಪಗಳಲ್ಲಿ ನೆರವು ನೀಡುವುದು, ರಕ್ತದಾನ ಶಿಬಿರಗಳನ್ನು ಆಯೋಜಿಸುವುದು,ಪ್ರಥಮ ಚಿಕಿತ್ಸೆ ತರಬೇತಿ ನೀಡುವುದು,ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದು, ನಿರಾಶ್ರಿತರು ಮತ್ತು ಬಡವರಿಗೆ ಸಹಾಯ ಮಾಡುವುದರಲ್ಲಿ ಹೆಚ್ಚು ಹೆಚ್ಚು ಸ್ವಯಂ ಸೇವಕರು ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.
ಪ್ರಾಂಶುಪಾಲರಾದ ಡಾ. ಆನಂದ ಕುಮಾರ ಎಸ್. ಲಾಲಸಂಗಿ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿಶ್ವದಲ್ಲಿ ಶಾಂತಿ ಸ್ಥಾಪಿಸುವಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಪಾತ್ರ ಮಹತ್ವದಾಗಿದೆ ಎಂದು ಸ್ಮರಿಸಿದರು. ನೊಬೆಲ್ ಪುರಸ್ಕೃತರಾದ ಹೆನ್ರಿ ಡುನಾoಟ್ ರವರ ಪರಿಶ್ರಮದಿಂದಾಗಿ ಇಂದು ಪ್ರಪಂಚದಾದ್ಯಂತ ರೆಡ್ ಕ್ರಾಸ್ ಸಂಸ್ಥೆಯು ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ನಿಸ್ವಾರ್ಥ ಸೇವೆಯಿಂದಾಗಿ ಜನ ಮನ್ನಣೆಯನ್ನು ಗಳಿಸಿದೆ ಎಂದು ಶ್ಲಾಘಿಸಿದರು ಮತ್ತು ಮಹಾವಿದ್ಯಾಲಯದಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ.ಲಿಂಗರಾಜ ಎಂ ಅಂಗಡಿ, ಐಕ್ಯೂಎಸಿ ಸಂಚಾಲಕರಾದ ಯಶೋಧ ಅಂಗಡಿ ಮತ್ತು ಯುವ ರೆಡ್ ಕ್ರಾಸ್ ಘಟಕದ ಸ್ವಯಂಸೇವಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .
