ವಿಜಯ ಸಿಂಧೂರ ರೋಣ
ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಶೋಷಿತ ಸಮಾಜದ ಪರಿವರ್ತನೆಗೆ ಸೂರ್ಯ- ಚಂದ್ರ ಇದ್ದ ಹಾಗೆ ಎಂದು ತಹಸೀಲ್ದಾರ ನಾಗರಾಜ್ ಕೆ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ,ಪುರಸಭೆ ಹಾಗೂ ದಲಿತಪರ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರರ ೧೩೫ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ ೧೧೯ನೇ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ ಅವರುಗಳು ಶೋಷಿತ ಸಮಾಜದ ಧ್ವನಿಯಾಗಿ ಸಾಮಾಜಿಕ ಪರಿವರ್ತನೆಯ ಗಾಳಿ ಎಬ್ಬಿಸಿ ಜಾಗೃತಿಯ ಕಡೆ ಕೊಂಡೊಯ್ದುರು. ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಕಾರಣವಾದವರು ಎಂದರು
ಶತಶತಮಾನಗಳಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ತುಳಿತಕ್ಕೆ ಒಳಗಾಗುತ್ತಿದ್ದ, ದಲಿತರಿಗೆ ಆಗುತ್ತಿದ್ದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದವರು ಬಾಬೂಜಿ ಮತ್ತು ಡಾ.ಅಂಬೇಡ್ಕರವರು ಅಸ್ಪೃಶ್ಯತೆಯ ನಿವಾರಣೆಗಾಗಿ ತಮ್ಮ ಶಾಲಾ ದಿನಗಳಿಂದಲೇ ಮೇಲ್ವರ್ಗದ ತಾರತಮ್ಯದ ವಿರುದ್ಧ ಹೋರಾಟ ನಡೆಸಿದವರು ಬಾಬು ಜಗಜೀವನ ರಾಂ. ಇವರ ಜನ್ಮದಿನವನ್ನು ಸಮಾನತೆಯ ದಿನವಾಗಿ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರ ಎಂದು ತಿಳಿಸಿದರು.
ಪುಂಡಲೀಕ ಮಾದರ ಉಪನ್ಯಾಸ ನೀಡಿ,ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಸಮಾಜದ ಬಗ್ಗೆ ಕಾಳಜಿ ವಹಿಸಿ ಶೋಷಿತರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು.ರಾಜಕೀಯದ ತುಳಿತಕ್ಕೆ ಒಳಗಾಗಿ ನೋವು ಅನುಭವಿಸಿ, ಸಮಾಜಕ್ಕೆ ದುಡಿದವರು, ಕಾರ್ಮಿಕರ ಕಲ್ಯಾಣಕ್ಕಾಗಿ ದುಡಿದವರು ಬಾಬೂಜಿಯವರು. ಬದುಕಿನ ಅನುಭವದ ಸಮಾಜದ ಕಾಳಜಿ ವಹಿಸಿದವರು ಬಾಬು ಜಗಜೀವನ್ ರಾಂ ಎಂದರು.

ಕಾಂಗ್ರೇಸ್ ಪಕ್ಷದ ಮುಖಂಡ ವಿ.ಬಿ.ಸೋಮನಕಟ್ಟಿಮಠ ಮಾತನಾಡಿ, ಬಾಬು ಜಗಜೀವನ್ ರಾಂ ಮತ್ತು ಡಾ.ಅಂಬೇಡ್ಕರ ಅವರು ದಲಿತ ಸಮುದಾಯದ ಆಶಾಕಿರಣ. ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಕೆಲಸ ಮಾಡಿದರು.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ರವರು ದಲಿತ ಸಮುದಾಯದ ಎರಡು ಕಣ್ಣುಗಳಿದ್ದಂತೆ ಎಂದರು
ಬಾಬಾ ಸಾಹೇಬರು ಸಮಾಜ ಸುಧಾರಕರಾದರೆ ಬಾಬು ಜಗಜೀವನ್ ರಾಮ್ ರವರು ಪ್ರಭುದ್ಧ ರಾಜಕಾರಣಿಯಾಗಿದ್ದಾರೆ. ಬಾಬಾ ಸಾಹೇಬರು ತಂದ ಸಂವಿಧಾನದ ಆಶಯವನ್ನು ತಮ್ಮ ಕಾಲಘಟ್ಟದಲ್ಲಿ ಯಥಾರ್ಥವಾಗಿ ಜಾರಿಗೆ ತರಲು ಪ್ರಯತ್ನಿಸಿದ ಕೀರ್ತಿ ಬಾಬು ಜಗಜೀವನ್ ರಾಮ್ ರವರಿಗೆ ಸಲ್ಲುತ್ತದೆ ಎಂದರು.
ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ ಎಂದು ಬಾಬಾ ಸಾಹೇಬರು ಘೋಷಿಸಿದರೆ, ಹಿಂದೂ ಧರ್ಮದಲ್ಲಿ ಇದ್ದುಕೊಂಡೆ ಹಿಂದೂ ಧರ್ಮದಲ್ಲಿ ಸುಧಾರಣೆ ಮಾಡಬಹುದು ಎಂಬುದು ಬಾಬೂಜಿಯವರ ಪ್ರಬಲ ಪ್ರತಿಪಾದನೆಯಾಗಿತ್ತು. ಕೇಂದ್ರದಲ್ಲಿ ನಿರಂತರ ೩೫ ವರ್ಷಗಳ ಸಚಿವರಾಗಿದ್ದ ಬಾಬೂಜಿಯವರು ಸ್ವತಂತ್ರ ಬಂದಾಗ ಹಸಿವಿನಿಂದ ತತ್ತರಿಸಿದ್ದ ಭಾರತವನ್ನು ಹಸಿರು ಕ್ರಾಂತಿ ಮಾಡಿ ಹಸಿವು ನೀಗಿಸಿದರು. ರೈಲ್ವೆ ಸಚಿವರಾಗಿ ಅಂಬೇಡ್ಕರ್ ಅವರ ಆಶಯದಂತೆ ಶೇಕಡ ೧೦೦ರಷ್ಟು ಮೀಸಲಾತಿ ಜಾರಿಗೆ ತಂದರು, ಕಾರ್ಮಿಕ ಸಚಿವರಾಗಿ ಕಾರ್ಮಿಕರ ಹಕ್ಕುಗಳ ರಕ್ಷಣೆ ಜೊತೆಗೆ ಮಹಿಳಾ ನೌಕರರಿಗೆ ವಿಶೇಷ ಸೌಲಭ್ಯಗಳಿಗೆ ಕಾರಣಿ ಭೂತರಾಗಿದ್ದಾರೆ ಎಂದು ಹೇಳಿದರು.

ಉಪಸ್ಯಾಸಕ ಜಿ.ಬಿ.ಗುಡಿಮನಿ ಮಾತನಾಡಿ,ದೇಶ ಕಂಡ ಅಪ್ರತಿಮ ನಾಯಕರು ಬಾಬು ಜಗಜೀವನ್ ರಾಮ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಇಬ್ಬರೂ ಭಾರತದ ದಲಿತ ಮತ್ತು ಶೋಷಿತ ಸಮುದಾಯಗಳ ಏಳಿಗೆಗಾಗಿ ಹೋರಾಡಿದ ಪ್ರಮುಖ ನಾಯಕರು. ಜಗಜೀವನ್ ರಾಮ್ ಹಸಿರು ಕ್ರಾಂತಿ ಮತ್ತು ಕಾರ್ಮಿಕ ಸಚಿವರಾಗಿ, ಅಂಬೇಡ್ಕರ್ ಸಂವಿಧಾನ ಶಿಲ್ಪಿಯಾಗಿ ಮತ್ತು ಸಾಮಾಜಿಕ ಸಮಾನತೆಯ ಹರಿಕಾರರಾಗಿ ಶೋಷಿತರ ಧ್ವನಿಯಾದರು ಎಂದರು
ಸಾಮಾಜಿಕ ಸಮಾನತೆ ಇಬ್ಬರೂ ಜಾತೀಯತೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿದವರು. ಬಾಬು ಜಗಜೀವನ್ ರಾಮ್ ಅವರು “ಸಮಾನತೆಯ ದಿನ”ವಾಗಿ ಗುರುತಿಸಲ್ಪಟ್ಟರೆ, ಅಂಬೇಡ್ಕರ್ ಸಾಮಾಜಿಕ ಸಮಾನತೆಯ ಆರಾಧಕರಾಗಿದ್ದರು.ರಾಜಕೀಯ ಮತ್ತು ಸಂವಿಧಾನ ಅಂಬೇಡ್ಕರ್ ಭಾರತದ ಸಂವಿಧಾನವನ್ನು ರಚಿಸಿದರೆ, ಜಗಜೀವನ್ ರಾಮ್ ಅವರು ಸಂವಿಧಾನ ಸಭೆಯ ಸದಸ್ಯರಾಗಿ ಮತ್ತು ದೀರ್ಘಕಾಲದ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದರು ಎಂದರು.
ಅಂಬೇಡ್ಕರ್ ಅವರು ಧರ್ಮ ಬದಲಾವಣೆಯ ಮೂಲಕ ದಲಿತರಿಗೆ ವಿಮೋಚನೆ ಕಂಡರೆ, ಜಗಜೀವನ್ ರಾಮ್ ಕಾಂಗ್ರೆಸ್ ಪಕ್ಷದ ಮೂಲಕ ವ್ಯವಸ್ಥೆಯೊಳಗೆ ಹೋರಾಟ ನಡೆಸಿದರು ಜಗಜೀವನ್ ರಾಮ್ ಅವರು ಹಸಿರು ಕ್ರಾಂತಿಯ ಹರಿಕಾರ ಮತ್ತು ರಕ್ಷಣಾ ಸಚಿವರಾಗಿ, ಅಂಬೇಡ್ಕರ್ ಸಂವಿಧಾನ ಶಿಲ್ಪಿಯಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಇವರಿಬ್ಬರ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಮತ್ತು ಅವರ ಸಾಮಾಜಿಕ ನ್ಯಾಯದ ತತ್ವಗಳನ್ನು ಸ್ಮರಿಸಲಾಗುತ್ತದೆ ಎಂದು ಹೇಳಿದರು
ಬೆಳಿಗ್ಗೆ ಶ್ರೀ ಸಿದ್ದಾರೂಡರ ಮಠದ ಆವರಣದಿಂದ ಮೆರವಣಿಗೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಹಾಗೂ ಬಾಬು ಜಗಜೀವನ್ ರಾಂ ಅವರ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿ ಇರಿಸಿ ವಾದ್ಯಗೋಷ್ಠಿಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬಸವರಾಜ ಜಗ್ಗಲ, ಬಸವರಾಜ ತಳವಾರ, ಮಲ್ಲಿಕಾರ್ಜುನ ಹನಸಿ, ರಮೇಶ ಹೊಸಮನಿ, ಅರ್ಜುನ ಕಾಂಬೋಗಿ, ಪಿಎಸ್‌ಐ ಪ್ರಕಾಶ ಬಣಕಾರ, ಡಾ.ಅರವಿಂದ ಕಂಬಳಿ, ಗೀತಾ ಆಲೂರ, ಅಲಿಸಾಬ ನದಾಫ್, ಎಸ್. ಎಸ್. ನೀಲಗುಂದ,ಪಾಪಣ್ಣವರ. ಸಂಜಯ ದೊಡ್ಡಮನಿ, ಸುರೇಶ, ನಿಂಗಪ್ಪ ಮಾದರ, ದೇವೇಂದ್ರಪ್ಪ ಕೊಳ್ಳಪ್ಪನವರ, ಪ್ರಕಾಶ ಹೊಸಹಳ್ಳಿ, ಚಂದ್ರು ಹಲಗಿ, ಮಂಜು ದೊಡ್ಡಮನಿ, ಸೋಮು ನಾಗರಾಜ, ಸಂಗಪ್ಪ ಮಾದರ,ವೀರಪ್ಪ ತೆಗ್ಗಿಮನಿ, ಶರಣಪ್ಪ, ರಾಮಕೃಷ್ಣ ಪೂಜಾರ, ಸಂತೋಷ ಪೂಜಾರ ಸೇರಿದಂತೆ ಅನೇಕರು ಇದ್ದರು
