ವಿಜಯ ಸಿಂಧೂರ ತಾಳಿಕೋಟೆ
ತ್ಯಾಗ ಹಾಗೂ ಬಲಿದಾನದ ಪ್ರತೀಕವಾಗಿರುವ ಬಕ್ರೀದ್ (ಈದ್ ಉಲ್ ಅಝಾ) ಹಬ್ಬವನ್ನು ಪಟ್ಟಣದಲ್ಲಿ ಗುರುವಾರ ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಪಟ್ಟಣದ ಶಾಹಿ ಈದ್ಗಾ, ಹುಣಸಗಿ ರಸ್ತೆಯ ನೂತನ ಈದ್ಗಾ, ಮಿಲ್ಲತ್ ನಗರ ಈದ್ಗಾ ಸೇರಿದಂತೆ ವಿವಿಧ ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆಗಳು ನೆರವೇರಿದವು.
ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಈದ್ಗಾ ಮೈದಾನಗಳಿಗೆ ತೆರಳಿ “ಅಲ್ಲಾಹು ಅಕ್ಬರ್” ಎಂಬ ಘೋಷಣೆಗಳ ನಡುವೆ ನಮಾಜ್ ಸಲ್ಲಿಸಿದರು. ನಂತರ ಮನುಕುಲದ ಶಾಂತಿ, ಸೌಹಾರ್ದ ಹಾಗೂ ಸಮೃದ್ಧಿಗಾಗಿ ದುವಾ ಮಾಡಲಾಯಿತು. ಪ್ರಾರ್ಥನೆ ಬಳಿಕ ಪರಸ್ಪರ ಹಸ್ತಲಾಘವ ಮಾಡಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಹುಣಸಗಿ ರಸ್ತೆಯ ಐತಿಹಾಸಿಕ ಈದ್ಗಾ ಮೈದಾನದಲ್ಲಿ ನಡೆದ ಮುಖ್ಯ ಸಮಾರಂಭದಲ್ಲಿ ಧಾರ್ಮಿಕ ಮುಖಂಡ ಡಾ. ಮಿನಹಾಜ್ಜುದ್ದೀನ್ ಖಾಜಿ ಧರ್ಮೋಪದೇಶ ನೀಡಿದರು. “ತ್ಯಾಗ ಮನೋಭಾವ, ಸತ್ಯನಿಷ್ಠೆ ಹಾಗೂ ಬಡವರ ಸೇವೆಯೇ ನಿಜವಾದ ಇಸ್ಲಾಂ ಸಂದೇಶ. ದುರ್ಗುಣಗಳನ್ನು ತ್ಯಜಿಸಿ ಸದ್ಗುಣಗಳನ್ನು ಅಳವಡಿಸಿಕೊಂಡರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ” ಎಂದು ಹೇಳಿದರು.

ಪ್ರವಾದಿ ಇಬ್ರಾಹಿಂ ಅವರ ತ್ಯಾಗದ ಆದರ್ಶವನ್ನು ಸ್ಮರಿಸಿದ ಅವರು, ಬಡವರ ಹೃದಯ ಗೆಲ್ಲುವುದರ ಮೂಲಕ ಅಲ್ಲಾಹನ ಕೃಪೆಗೆ ಪಾತ್ರರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಯ್ಯದ್ ಶಕೀಲ ಅಹ್ಮದ್ ಕಾಜಿ, ಹಫೀಜ್ ಇಬ್ರಾಹಿಂ ಮುಲ್ಲಾ, ಮುಫ್ತಿ ಅಜರುದ್ದೀನ್ ಕಾಸ್ಮಿ, ಗನಿಸಾಬ ಲಾಹೋರಿ, ಅಬ್ದುಲ್ ರೆಹಮಾನ್ ಏಕೀನ್, ಅಲ್ಲಾಭಕ್ಷ ನಮಾಜಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
